
ಚಿಂತಾಮಣಿ: ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ, ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ, ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣದ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಎಚ್.ಎನ್. ವ್ಯಾಲಿ ಹಾಗೂ ಕೆ.ಸಿ. ವ್ಯಾಲಿ ನೀರನ್ನು ದ್ವಿತೀಯ ಹಂತಕದಲ್ಲಿ ಶುದ್ಧೀಕರಣ ಮಾಡಲಾಗಿದೆ. ಈ ಯೋಜನೆಯ ಮೂಲ ಉದ್ದೇಶವೇ ಅಂತರ್ಜಲ ವೃದ್ಧಿಸುವುದು ಮತ್ತು ಕೆರೆಗಳನ್ನು ತುಂಬಿಸುವುದಾಗಿದೆ. ಅಂತರ್ಜಲ ವೃದ್ಧಿಯಾಗಲು ನೀರು ಶೇಖರಣೆ ಮಾಡುವುದು. ಆ ನೀರನ್ನು ನೇರವಾಗಿ ಕೃಷಿ ಚಟುವಟಿಕೆ ಮತ್ತು ಅನ್ಯ ಉದ್ದೇಶಗಳಿಗೆ ಉಪಯೋಗಿಸುವಂತಿಲ್ಲ ಎಂದರು.
ಅಂತರ್ಜಲ 1,800 ರಿಂದ 2,000 ಅಡಿವರೆಗೆ ಕುಸಿದಿದೆ. ನಮ್ಮ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಈ ನೀರು ಬಂದರೆ ಕೆರೆಗಳು ತುಂಬುತ್ತವೆ. ಭೂಮಿಯ ಪದರಗಳಲ್ಲಿ ಆ ನೀರು ಹಿಂಗಿ ಶುದ್ಧಗೊಂಡು, ಬೇರೆ ಕಡೆ ಹೋಗುತ್ತದೆ ಎಂದು ನುಡಿದರು.
ಯಾವ ಭಾಗಗಳಲ್ಲಿ ಎಚ್.ಎನ್ ಹಾಗೂ ಕೆ. ಸಿ ವ್ಯಾಲಿ ನೀರು ಬಂದಿದೆಯೊ ಅಂಥ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ವರದಿಗಳನ್ನು ಕೊಡುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಂದವಾರ ಕೆರೆಗೆ ಎಚ್.ಎನ್ ವ್ಯಾಲಿ ನೀರು ಬರುತ್ತದೆ. ಅಲ್ಲಿ ಚಿಕ್ಕಬಳ್ಳಾಪುರ ನಗರದ ತ್ಯಾಜ್ಯ ನೀರು ಮಿಶ್ರಣವಾಗಿ ಗೋಪಾಲ ಕೃಷ್ಣ ಕೆರೆಗೆ ಬರುತ್ತಿದೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.