
ಚಿಂತಾಮಣಿ: ನಗರದ ಗುಂಡಪ್ಪ ಬಡಾವಣೆಯ ಮನೆಯೊಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಮಸ್ತೇನಹಳ್ಳಿ ಅಬ್ದುಲ್ ಕಲಾಂ ವಸತಿ ಶಾಲೆ ಪ್ರಾಂಶುಪಾಲೆ ಅರುಣ ಪಲ್ಲವಿ ಮಾತನಾಡಿ, ‘ಕವಿಗೋಷ್ಠಿ ಎಂಬುದು ಕೇವಲ ಕವನಗಳ ಪಠಣದ ವೇದಿಕೆಯಲ್ಲ. ಬದಲಿಗೆ ಮನಸ್ಸು, ಮನಸುಗಳನ್ನು ಬೆಸೆಯುವ ಮತ್ತು ಭಾವನೆಗಳಿಗೆ ಧ್ವನಿ ನೀಡುವ ಸಾಂಸ್ಕೃತಿಕ ಸಂಭ್ರಮ’ ಎಂದು ಪ್ರತಿಪಾದಿಸಿದರು.
ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳ ಕೈಯಲ್ಲಿ ಪುಸ್ತಕಕ್ಕಿಂತ ಮೊಬೈಲ್ ಹೆಚ್ಚಾಗಿ ಕಾಣುತ್ತಿದೆ. ಮನೆಗೊಂದು ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮಾತಿನ ಸೌಂದರ್ಯ, ಭಾವನೆ ಮೌಲ್ಯ ಮತ್ತು ಕನ್ನಡದ ಶ್ರೀಮಂತಿಕೆ ಪರಿಚಯಿಸುತ್ತದೆ. ಪ್ರತಿ ಮನೆ ಕಾವ್ಯ ಮಂದಿರವಾಗಲಿ, ಪ್ರತಿ ಮಗು ಕವಿಯಾಗಿ ಬೆಳೆಯಲಿ, ಪ್ರತಿ ಮನಸ್ಸು ಮಾನವೀಯತೆಯಿಂದ ತುಂಬಲಿ ಎಂಬುದು ಕಾರ್ಯಕ್ರಮದ ಆಶಯವಾಗಬೇಕು. ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತವಿಕ ನುಡಿಗಳನ್ನಾಡಿದ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಅಶ್ವಥ್, ಕನ್ನಡ ಭಾಷೆ ವಿಶ್ವದ ಅದ್ಭುತ ಭಾಷೆಗಳಲ್ಲಿ ಒಂದಾಗಿದ್ದು, 2,000 ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ಪರಿಷತ್ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಮನೆಗೊಂದು ಕವಿಗೋಷ್ಠಿ, ಶಾಲಾ ಅಂಗಳದಲ್ಲಿ ಕವಿ-ಕಾವ್ಯ ಪರಿಚಯ, ಮಹನೀಯರ ಜಯಂತಿ, ಹುಣ್ಣಿಮೆಯಂದು ಸಾಧಕರ ಸ್ಮರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕನ್ನಡ ಗೀತೆಗಳ ಗಾಯನ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಅಶೋಕ್ ಕುಮಾರ್ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಸಮಾಲೋಚಕ ಎಸ್.ಎ.ಪಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ವೈ. ನಂಜುಂಡಗೌಡ, ಎಸ್.ಎಫ್.ಎಸ್ ಸುರೇಶ್, ಇರಗಂಪಲ್ಲಿ ವೆಂಕಟರವಣಪ್ಪ, ಕನ್ನಡ ಗೀತೆಗಳನ್ನು ಹಾಡಿದರು.
ಶಿ.ಮ. ಮಂಜುನಾಥ್, ಕೆ.ಎಸ್. ನೂರುಲ್ಲಾ, ಎನ್.ವಿ. ಶ್ರೀನಿವಾಸನ್, ಲಕ್ಷ್ಮೀದೇವ, ಈ.ವೈ. ಸರಸ್ವತಮ್ಮ, ವೆಂಕಟೇಶಪ್ಪ, ಆರತಿ, ಮಸ್ತಾನ್ ವಲಿ, ಲಾವಣ್ಯ ಸ್ವರಚಿತ ಕವನ ವಾಚನ ಮಾಡಿದರು.
ಕವಿಗೋಷ್ಠಿ ಪ್ರಾಯೋಜಕಿ ಸುಲೋಚನ ಮತ್ತು ಆರ್. ವೆಂಕಟರಮಣರೆಡ್ಡಿ ದಂಪತಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಸ್ತೇನಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲೆ ಅರುಣ ಪಲ್ಲವಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್, ಪದಾಧಿಕಾರಿಗಳಾದ ಕುಂಟಿಗಡ್ಡೆ ಎಂ.ಲಕ್ಷ್ಮಣ್, ಎಸ್.ಎನ್. ರಂಗನಾಥ, ಟಿ.ಎಂ. ಈಶ್ವರ್ ಸಿಂಗ್, ಕೆ.ಎಂ. ವೆಂಕಟೇಶ್, ಜಯಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.