ADVERTISEMENT

ಚಿಂತಾಮಣಿ: ಯಗವಕೋಟೆ ಶಾಲೆಗೆ ಕೆಪಿಎಸ್ ಭಾಗ್ಯ

220 ವಿದ್ಯಾರ್ಥಿಗಳು ಈ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ

ಎಂ.ರಾಮಕೃಷ್ಣಪ್ಪ
Published 22 ಅಕ್ಟೋಬರ್ 2025, 6:21 IST
Last Updated 22 ಅಕ್ಟೋಬರ್ 2025, 6:21 IST
ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆ
ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆ   

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಯಗವಕೋಟೆ ಸರ್ಕಾರಿ ಪ್ರೌಢಶಾಲೆಯು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಂಡಿದೆ. 

1969ರಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 8ರಿಂದ 10ನೇ ತರಗತಿಗಳಲ್ಲಿ ಒಟ್ಟಾರೆ 220 ವಿದ್ಯಾರ್ಥಿಗಳು ಓದುತ್ತಿದ್ದಾರೆ. 7 ಮಂದಿ ಸಿಬ್ಬಂದಿ ಕಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ಐವರು ಸೇರಿದಂತೆ 12 ಶಿಕ್ಷಕರು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಎಲ್‌ ಕೆ.ಜಿಯಿಂದ ದ್ವಿತೀಯ ಪಿಯುವರೆಗೆ ಒಂದೇ ಸೂರಿನಡಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ 2018–19ರ ಸಾಲಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಕೆಪಿಎಸ್ ಯೋಜನೆಯೂ ಒಂದಾಗಿದೆ. 

ADVERTISEMENT

ಕರ್ನಾಟಕ ಸರ್ಕಾರವು 2025–26ನೇ ಸಾಲಿನಲ್ಲಿ ರಾಜ್ಯದಾದ್ಯಂತ ಹೊಸದಾಗಿ 700 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದು, ಚಿಂತಾಮಣಿ ತಾಲ್ಲೂಕಿನ ಮೂರು ಶಾಲೆಗಳಿಗೆ ಕೆಪಿಎಸ್ ಭಾಗ್ಯ ದೊರೆತಿದೆ.

ಮುರುಗಮಲ್ಲಾ ಹೋಬಳಿಯ ಯಗವಕೋಟೆ ಸರ್ಕಾರಿ ಪ್ರೌಢಶಾಲೆ, ಬಟ್ಲಳ್ಳಿಯ ಸರ್ಕಾರಿ ಪಿಯು ಕಾಲೇಜು, ಚಿಂತಾಮಣಿ ನಗರದ ಬಾಲಕಿಯರ ಪಿಯು  ಕಾಲೇಜುಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಈ ಮೂರು ಶಾಲೆಗಳನ್ನು ಕೆಪಿಎಸ್ ಶಾಲೆಯಾಗಿ ಮಾರ್ಪಾಡು ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ಗುಣಮಟ್ಟದ ಕಲಿಕೆ ಮತ್ತು ಹಾಜರಾತಿ ಹೆಚ್ಚಿಸಲು, ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸರ್ಕಾರ ಕೈಗೊಂಡಿರುವ ಸುಧಾರಣಾತ್ಮಕ ಕಾರ್ಯತಂತ್ರದ ಫಲವೇ ಕೆಪಿಎಸ್ ಶಾಲೆಗಳು. 

ಕೆಪಿಎಸ್‌ ಶಾಲೆಗಳು ಶಾಲಾಪೂರ್ವ ತರಗತಿ ಎಲ್‌ ಕೆ.ಜಿಯಿಂದ 12ನೇ ತರಗತಿವರೆಗೆ (ಪಿಯುಸಿ) ಶಿಕ್ಷಣ ಒದಗಿಸುತ್ತವೆ. ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಉತ್ತೇಜಿಸುತ್ತದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪಿಯುಸಿ ಹಂತಗಳಲ್ಲಿ ದಾಖಲಾತಿ ಅಗತ್ಯವಿಲ್ಲ. ವಿವಿಧ ದಾಖಲಾತಿ ಹಂತಗಳಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯುವ ಸಂಖ್ಯೆಯೂ ಕಡಿಮೆಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆ
ಸರ್ಕಾರಿ ಪ್ರೌಢಶಾಲೆಯನ್ನು ಕೆಪಿಎಸ್ ಶಾಲೆಯನ್ನಾಗಿ ಉನ್ನತೀಕರಿಸಿರುವುದರಿಂದ ಎಲ್ ಕೆ.ಜಿಯಿಂದ ಆರಂಭವಾಗಿ ದ್ವಿತೀಯ ಪಿಯುವರೆಗೆ ಒಂದೇ ಕಡೆ ಶಿಕ್ಷಣ ಸಿಗಲಿದೆ. ಇದರಿಂದ ಪ್ರಸ್ತುತ ಓದುತ್ತಿರುವ ಶಾಲೆಯಿಂದ ಟಿ.ಸಿ. ಪಡೆದು ವಿದ್ಯಾರ್ಥಿಗಳು ಬೇರೆ ಶಾಲೆಗೆ ದಾಖಲಾತಿಯಾಗುವುದನ್ನು ತಪ್ಪಿಸಲಿದೆ. 
ಹೇಮಾವತಿ ಎಸ್‌ಡಿಎಂಸಿ ಅಧ್ಯಕ್ಷೆ
ಹಲವು ವರ್ಷಗಳ ಕನಸು ಈಗ ನನಸಾಗಿದೆ. ಸಕಲ ಸೌಲಭ್ಯಗಳೊಂದಿಗೆ ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಶಾಲಾ ಮಕ್ಕಳು ಮತ್ತು ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
ಶ್ರೀನಿವಾಸಪ್ಪ ಮುಖ್ಯ ಶಿಕ್ಷಕ

ಆಧುನಿಕ ಕೌಶಲ್ಯಗಳ ತರಬೇತಿ

ಈ ಶಾಲೆಗಳು ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಒಳಗೊಂಡಿರುತ್ತವೆ. ಸಣ್ಣ ಶಾಲೆಗಳನ್ನು ಕೆಪಿಎಸ್‌ ಶಾಲೆಗಳಲ್ಲಿ ಸಮ್ಮಿಳಿತಗೊಳಿಸಿ ಶಾಲಾ ಏಕೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಲಾಗುತ್ತದೆ. ಉತ್ತಮ ಸಂಪನ್ಮೂಲ ಬಳಕೆ ಮತ್ತು ದಕ್ಷ ಆಡಳಿತಕ್ಕಾಗಿ ಶಾಲಾ ಸಂಕೀರ್ಣಗಳ ಸ್ಥಾಪನೆ ಮೂಲಕ ಶಾಲಾ ಏಕೀಕರಣ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.  ಕೆಪಿಎಸ್‌ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ₹2 ಕೋಟಿಯಿಂದ ₹4 ಕೋಟಿವರೆಗೆ ವಿಶೇಷ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶಾಲೆಗೆ ಗ್ರಂಥಾಲಯ ವಿಜ್ಞಾನ ಪ್ರಯೋಗಾಲಯ ಇಂಟೆರ್ನೆಟ್ ಸೌಲಭ್ಯವಿರುವ ಸ್ಮಾರ್ಟ್ ತರಗತಿ ಸಿ.ಸಿ. ಕ್ಯಾಮೆರಾ ಅಳವಡಿಕೆ ಆಧುನಿಕ ಸಾಮಗ್ರಿಗಳು ಆಧುನಿಕ ಪಾಠೋಪಕರಣಗಳು ಮತ್ತು ಪೀಠೋಪಕರಣಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.