ಚಿಂತಾಮಣಿ: ಅಂಚೆ ಇಲಾಖೆಯು ಜೂನ್ 23ರಿಂದ ‘ಐಟಿ 2.0’ ಹೆಸರಿನ ಹೊಸ ತಂತ್ರಾಂಶ ಅಳವಡಿಸಿಕೊಂಡು ಜನಸಾಮಾನ್ಯರಿಗೆ ವೇಗದ ಸೇವೆ ನೀಡುತ್ತಿದೆ. ಆದರೆ, ಇಂಥ ಅಂಚೆ ಕಚೇರಿಗೆ ತಾಲ್ಲೂಕು ಕೇಂದ್ರ ಹಾಗೂ ಯಾವುದೇ ಉಪ ಅಂಚೆ ಕಚೇರಿ ಮತ್ತು ಶಾಕಾ ಅಂಚೆ ಕಚೇರಿಗಳಿಗೆ ಸ್ವಂತ ಸೂರು ಇಲ್ಲ.
ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಅಂಚೆ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದಿರುವುದು ಇಲ್ಲಿನ ಕ್ಷೇತ್ರದಿಂದ ಆಯ್ಕೆಯಾದ ಸಂಸದರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಅಭಿವೃದ್ಧಿ ಮತ್ತು ಸಾಧನೆ ಜಪಿಸುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳಿಗೆ 150 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲಾಖೆ ಕಚೇರಿಗೆ ಸ್ವಂತ ಸೂರು ಇಲ್ಲದಿರುವ ವಿಚಾರ ನಗಣ್ಯವಾಗಿರುವುದು ದುರಂತವೇ ಸರಿ.
ಚೇಳೂರು ವೃತ್ತದಲ್ಲಿ ಹೆಚ್ಚು ಜನನಿಬಿಡ ಹಾಗೂ ವಾಹನಗಳ ನಿಲುಗಡೆ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡದ ಮುಂದೆ ಬ್ಯಾಂಕ್, ಫೈನಾನ್ಸ್ ಮತ್ತಿತರ ಕಚೇರಿಗಳಿವೆ. ಹಿಂದಿನ ಓಣಿಯಂತಹ ಜಾಗದಲ್ಲಿ ಅಂಚೆ ಕಚೇರಿ ಇದೆ. ಕಚೇರಿಗೆ ಅಗತ್ಯವಿರುವ ಯಾವುದೇ ಸೌಲಭ್ಯಗಳು ಇಲ್ಲ. ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಾಹನಗಳ ಸಂಚಾರವಿರುತ್ತದೆ. ಅವುಗಳ ನಡುವೆ ತೂರಿಕೊಂಡು ಅಂಚೆ ಕಚೇರಿಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಅಂಚೆಕಚೇರಿ ನಾಮಫಲಕವೂ ಕಾಣುವುದಿಲ್ಲ.
ಚೇಳೂರು ವೃತ್ತದ ಕೋಲಾರ ರಸ್ತೆ ಮತ್ತು ಚೇಳೂರು ರಸ್ತೆಯಿಂದಲೂ ಕಚೇರಿ ಓಣಿಗೆ ಪ್ರವೇಶವಿದೆ. ಹಳೆಯ ಕಟ್ಟಡವನ್ನು ಕಚೇರಿಯಾಗಿ ಪರಿವರ್ತಿಸಲಾಗಿದೆ. ಎರಡು ಕಡೆ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಲಾಗಿರುತ್ತದೆ. ವೃದ್ಧರು, ಮಹಿಳೆಯರು ಜೀವ ಕೈಯಲ್ಲಿಡಿದು ಅಂಚೆ ಕಚೇರಿಗೆ ಬರುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ವೃದ್ಧಾಪ್ಯ ವೇತನ ಪಡೆಯಲು ಬರುವ ಹಿರಿಯಜ್ಜ ರಾಮಯ್ಯ.
ನಗರದ ಬೆಂಗಳೂರು ರಸ್ತೆಯಿಂದ ಅಂಜನಿ ಬಡಾವಣೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಾರ್ಕೆಟ್ ಅಂಚೆ ಕಚೇರಿ ಇದೆ. ಇದು ಮಹಡಿ ಮೇಲಿದ್ದು, ಮಹಿಳೆಯರು, ವೃದ್ಧರು ಮೆಟ್ಟಿಲುಗಳನ್ನು ಹತ್ತಿ ಇಳಿಯಲು ದುಸ್ಸಾಹ ಪಡಬೇಕಾಗಿದೆ. ಇಂಟರ್‌ನೆಟ್, ಆನ್ ಲೈನ್ ಸೇವೆ ಇರುವುದರಿಂದ ಯುವಕರು ಹೆಚ್ಚಾಗಿ ಅಂಚೆ ಕಚೇರಿಗಳಿಗೆ ಹೋಗುವುದಿಲ್ಲ. ಮಹಿಳೆಯರು ಹಾಗೂ ವಯೋವೃದ್ಧರು ಹೆಚ್ಚಾಗಿ ಅಂಚೆ ಕಚೇರಿಗಳಿಗೆ ಹೋಗುತ್ತಾರೆ. ಮಹಿಳೆಯರು, ವೃದ್ಧರು ಕಚೇರಿಗೆ ಹತ್ತಿ-ಇಳಿದು ಹಿಡಿಶಾಪ ಹಾಕುತ್ತಾರೆ.
ತಾಲ್ಲೂಕು ಕೇಂದ್ರದಲ್ಲಿಯೇ ಕಟ್ಟಡ ಇಲ್ಲದಿರುವಾಗ ತಾಲ್ಲೂಕಿನ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳ ಕಟ್ಟಡಗಳನ್ನು ಕೇಳುವಂತೆಯೇ ಇಲ್ಲ. ಸ್ವಾತಂತ್ರ್ಯಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಕೇಂದ್ರದ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಎಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನಗರದ ನಾಗರಿಕರು ವಿಷಾದಿಸುತ್ತಾರೆ.
ಕೂರಲು ಸ್ಥಳವೇ ಇಲ್ಲ
ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ತಂದ ಹಲವಾರು ಸಾಮಾಜಿಕ ವೃದ್ಧಾಪ್ಯ ವೇತನ ಪಡೆಯಲು ವೃದ್ಧರು ಅಂಚೆ ಕಚೇರಿಗೆ ಬರುತ್ತಾರೆ. ಕಚೇರಿ ಒಳಗೆ ಹೋಗಲು ದುಸ್ಸಾಹಸ ಮಾಡಬೇಕಾಗುತ್ತದೆ. ಎರಡು ಕಡೆಯ ರಸ್ತೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ವಾಹನಗಳ ನಡುವೆ ತೂರಿಕೊಂಡು ಹೋದರೆ ಅಂಚೆ ಕಚೇರಿಯ ಕಿಷ್ಕಿಂದೆಯಾಗಿದೆ. ಕಚೇರಿಯ ಒಳಗಾಗಲಿ ಅಥವಾ ಹೊರಗಾಗಲೀ ಕೂರಲು ಸ್ಥಳವೇ ಇಲ್ಲ. ಕುಡಿಯುವ ನೀರು ಶೌಚಾಲಯ ಮುಂತಾದ ಯಾವುದೇ ಮೂಲ ಸೌಲಭ್ಯಗಳೇ ಇಲ್ಲ.
ತಲೆ ತಗ್ಗಿಸುವ ಅಂಶ
150 ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಅಂಚೆ ಕಚೇರಿಗೆ ತಾಲ್ಲೂಕು ಕೇಂದ್ರದಲ್ಲಿ ಸ್ವಂತ ಕಟ್ಟಡವಿಲ್ಲ ಎಂಬುದು ಸರ್ಕಾರ ತಲೆತಗ್ಗಿಸುವ ವಿಷಯ. ಎಲ್ಲ ವರ್ಗಗಳ ಸಾರ್ವಜನಿಕರಿಗೆ ಅಗತ್ಯವಿರುವ ಅಂಚೆ ಕಚೇರಿಗೆ ಸೂಕ್ತ ಕಟ್ಟಡ ನಿರ್ಮಿಸಬೇಕು. ಕೇಂದ್ರ ಈ ಬಗ್ಗೆ ಕ್ಷೇತ್ರದ ಸಂಸದರು ಈ ಬಗ್ಗೆ ಗಮನ ಹರಿಸಬೇಕು.– ಲಕ್ಷ್ಮಿನಾರಾಯಣರೆಡ್ಡಿ, ನಾಗರಿಕ ಚಿಂತಾಮಣಿ
ಶೀಘ್ರ ಅಂಚೆ ಕಚೇರಿ ಆರಂಭ
ನಗರದ ಅಂಚೆ ಕಚೇರಿಗೆ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ್ಯ ದೇವಾಲಯದ ಸಮೀಪ ನಿವೇಶನವಿದೆ. ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಟೆಂಡರ್ ಮತ್ತಿತರ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.– ಅರುಣಕುಮಾರ್, ಉಪವಿಭಾಗದ ಇನ್‌ಸ್ಪೆಕ್ಟರ್ ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.