ADVERTISEMENT

ಚಿಂತಾಮಣಿ: ₹8.94 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 3:04 IST
Last Updated 11 ಅಕ್ಟೋಬರ್ 2025, 3:04 IST
ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು   

ಚಿಂತಾಮಣಿ: ಚಿಂತಾಮಣಿ-ಚೇಳೂರು ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ಜತೆಗೆ ಕೈಗಾರಿಕಾ ಪ್ರಾಂಗಣ ಸ್ಥಾಪನೆ ಆಗುತ್ತಿರುವುದರಿಂದ ಭವಿಷ್ಯದಲ್ಲಿ ಜೋಡಿ ರಸ್ತೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್‌ನಲ್ಲಿ ಜೋಡಿರಸ್ತೆ ಕಾಮಗಾರಿ ಸೇರಿದಂತೆ ₹8.94 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಚೇಳೂರು ರಸ್ತೆಯ ಸಿದ್ದೇಪಲ್ಲಿ ಕ್ರಾಸ್ ಮತ್ತು ನಗರದ ರೈಲ್ವೆ ಅಂಡರ್ ಪಾಸ್ ಬಳಿ ರಸ್ತೆ ಸುರಕ್ಷತಾ ಯೋಜನೆ ಅಡಿಯಲ್ಲಿ ಜೋಡಿ ರಸ್ತೆಯಾಗುತ್ತಿರುವುದರಿಂದ ಕೆಲವರಿಗೆ ತೊಂದರೆ ಆಗಬಹುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ರೈತರಿಗೆ ಕೃಷಿಗೆ ನೀರು ಒದಗಿಸುವುದು ಹಾಗೂ ಅಂತರ್ಜಲ ವೃದ್ಧಿಗಾಗಿ ಅಂಬಾಜಿದುರ್ಗ-ಮುಂಗಾನಹಳ್ಳಿ-ಚಿಲಕಲನೇರ್ಪು ಹೋಬಳಿಗಳಲ್ಲಿ ಸುಮಾರು ₹140 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುವುದು. ಯೋಜನೆಯ ಮೊದಲ ಭಾಗ ₹41 ಕೋಟಿಗೆ ಟೆಂಡರ್ ಆಗಿದೆ. ಎರಡನೆ ಭಾಗದ ₹48 ಕೋಟಿಯ ಯೋಜನೆ ಟೆಂಡರ್ ಹಂತದಲ್ಲಿದೆ. ಮೂರನೇ ಭಾಗದ ಯೋಜನೆಯ ₹50 ಕೋಟಿ ಮಂಜೂರಾತಿ ಹಂತದಲ್ಲಿದೆ ಎಂದು ತಿಳಿಸಿದರು.

ಅಂತರ್ಜಲ ವೃದ್ಧಿಗಾಗಿ ತಾಲ್ಲೂಕಿನ 140 ಕೆರೆಗಳಿಗೆ ನೀರು ತುಂಬಿಸುವ ಎಚ್.ಎನ್ ವ್ಯಾಲಿಯ 3ನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಶುದ್ಧ ಕುಡಿಯುವ ನೀರು ಒದಗಿಸಲು ಪ್ರತಿ ಗ್ರಾಮಕ್ಕೂ ಫಿಲ್ಟರ್ ನೀಡಲಾಗುವುದು. ಈಗಾಗಲೇ 90 ಗ್ರಾಮಗಳಲ್ಲಿ ಫಿಲ್ಟರ್ ಸ್ಥಾಪಿಸಲಾಗಿದೆ. 49 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಎರಡೂವರೆ ವರ್ಷದಲ್ಲಿ ಬಾಕಿ ಇರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಒದಗಿಸಲಾಗುವುದು ಎಂದರು.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು 100 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಎಲ್ಲ ರಸ್ತೆಗಳ ದುರಸ್ತಿಗೊಳಿಸಲಾಗುವುದು. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಲ್ಲೂ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡ ನಿರ್ಮಾಣಕ್ಕಾಗಿ ಗುರುವಾರ ನಡೆದ ಸಚಿವ ಸಂಪುಟದಲ್ಲಿ ₹50 ಕೋಟಿಗೆ ಅನುಮೋದನೆ ದೊರೆತಿದೆ. ಸರ್ಕಾರಿ ಪಾಲಿಟೆಕ್ನಿಕ್ ಸ್ಥಾಪನೆಯಾಗಿ 76 ವರ್ಷ ಸಂದಿದ್ದು, ಕಟ್ಟಡ ನವೀಕರಣಕ್ಕಾಗಿ ₹76 ಕೋಟಿ ಯೋಜನೆ ರೂಪಿಸಲಾಗಿದೆ. ₹26 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಉಳಿದ ₹50 ಕೋಟಿಗೆ ಅನುಮೋದನೆ ಆಗಿದೆ ಎಂದರು.

ಸರ್ಕಾರಿ ಸೌಲಭ್ಯ ಸದುಪಯೋಗ ಆಗಬೇಕೆ ವಿನ: ದುರುಪಯೋಗ ಆಗಬಾರದು. ರಾಜ್ಯದಲ್ಲೆ ಪ್ರಥಮವಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಒಂದು ವರ್ಷದ ಸಂಪೂರ್ಣ ಹಣವನ್ನು ಅಂಗವಿಕಲರಿಗೆ ತ್ರಿಚಕ್ರವಾಹನ ವಿತರಣೆಗೆ ಬಳಕೆ ಮಾಡಲಾಗಿದೆ. ಬೇರೆಯವರಿಗೆ ನೀಡುವುದು, ಚಕ್ರ ತೆಗೆದು ದ್ವಿಚಕ್ರವಾಹನ ಮಾಡಿಕೊಳ್ಳುವುದು ಮತ್ತಿತರ ದೂರು ಬರುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ದುರುಪಯೋಗ ಕಂಡುಬಂದರೆ ವಾಹನ ಹಿಂಪಡೆಯಲಾಗುತ್ತದೆ ಎಂದರು.

ಸಿದ್ದೇಪಲ್ಲಿ–ಬಟ್ಲಹಳ್ಳಿ–ಅಂಕಾಲಮಡುಗು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ, ಮುರುಗಮಲ್ಲ ಹೋಬಳಿಯ ಬೈರಸಂದ್ರ ಸಂಪರ್ಕಿಸುವ ರಸ್ತೆ, ಭೂಮಿಶೆಟ್ಟಿಹಳ್ಳಿ ಸಂಪರ್ಕಿಸುವ ರಸ್ತೆ, ಆಲಪಲ್ಲಿಯಿಂದ ಗೊಂದಿವಾರಿಪಲ್ಲಿ ರಸ್ತೆ, ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಾಜಪಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿ, ನಂದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಲ್ಲಿ ಗ್ರಾಮದ ಸಿಸಿ ರಸ್ತೆ ಮತ್ತು ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, ನಂದಿಗಾನಹಳ್ಳಿ ಮುಖ್ಯ ರಸ್ತೆಯಿಂದ ದೊಡ್ಡಕರಕಮಾಕಲಹಳ್ಳಿ ಕೊಟಾರಿ ಬಂಡೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ, ನಂದಿಗಾನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉಗ್ರಾಣ ಕಟ್ಟಡ ಹಾಗೂ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನ ಕಟ್ಟಗಳ ಉದ್ಘಾಟನೆ ನೆರವೇರಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ತಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಶ್ರೀರಾಮರೆಡ್ಡಿ, ತಹಶೀಲ್ದಾರ್ ಸುದರ್ಶನ ಯಾದವ್, ಇಒ ಎಸ್.ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.