ADVERTISEMENT

ಚಿಂತಾಮಣಿ ಉಪನಗರ ಯೋಜನೆ ಆರಂಭ: ಡಾ.ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:31 IST
Last Updated 22 ಡಿಸೆಂಬರ್ 2025, 6:31 IST
ಚಿಂತಾಮಣಿಯ ಪಟಾಲಮ್ಮ ದೇವಾಲಯದ ವೃತ್ತದಲ್ಲಿ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು
ಚಿಂತಾಮಣಿಯ ಪಟಾಲಮ್ಮ ದೇವಾಲಯದ ವೃತ್ತದಲ್ಲಿ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು   

ಚಿಂತಾಮಣಿ: ನಗರದ ಹೊರಭಾಗದಲ್ಲಿ ಸುಮಾರು 500-600 ಎಕರೆ ಪ್ರದೇಶದಲ್ಲಿ ಚಿಂತಾಮಣಿಯ ಉಪನಗರವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರದ ನೆಕ್ಕುಂದಿ ಅಗ್ರಹಾರದ ಬಳಿಯ ಪಟಾಲಮ್ಮ ದೇವಾಲಯದ ಬಳಿಯ ವೃತ್ತದಲ್ಲಿ ನಗರಸಭೆ ನಿಧಿಯಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಹೈ ಮಾಸ್ಟ್ ದೀಪವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ನಗರದ ನೆಕ್ಕುಂದಿ ಕೆರೆಯ ಅಭಿವೃದ್ಧಿಗೆ ₹74 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಚಿಂತಾಮಣಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜನರ ಬೇಡಿಕೆ ಮತ್ತು ನಿರೀಕ್ಷೆ ಹೆಚ್ಚಾಗಿವೆ. ಹೀಗಾಗಿ ಎಲ್ಲರಿಗೂ ವಸತಿ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗಿದೆ. ಹಾಗಾಗಿ ಉಪನಗರ ನಿರ್ಮಾಣದ ಯೋಜನೆ ರೂಪಿಸಲಾಗುತ್ತಿದೆ ಎಂದರು.

ADVERTISEMENT

ನೆಕ್ಕುಂದಿ ಕೆರೆಯ ಸುತ್ತಮುತ್ತಲಿನ ಪ್ರದೇಶ, ಮುಂತಕದಿರೇನಹಳ್ಳಿ, ನಾಯನಹಳ್ಳಿ, ಧನಮಿಟ್ಟೇನಹಳ್ಳಿ ಪ್ರದೇಶಗಳಲ್ಲಿ ಈಗಾಗಲೇ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದಾರೆ. ಸುಮಾರು 400-500 ಎಕರೆ ಪ್ರದೇಶ ಲಭ್ಯವಾಗುತ್ತದೆ. ಮಧ್ಯದಲ್ಲಿ ಬರುವ ರೈತರ ಜಮೀನುಗಳಿಗೆ ಹೆಚ್ಚಿನ ಪರಿಹಾರ ಕೊಡಿಸಲಾಗುವುದು. ಸುಮಾರು 10 ಸಾವಿರ ನಿವೇಶನ ದೊರೆಯುವ ಅಂದಾಜಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲ ಸೌಲಭ್ಯಗಳುಳ್ಳ ಉಪನಗರವನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.

ಕೋಲಾರ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಚಿಂತಾಮಣಿಯಲ್ಲಿ ಒಳಚರಂಡಿ ಯೋಜನೆಯನ್ನು ಅಂದಿನ ಶಾಸಕ ಚೌಡರೆಡ್ಡಿ ಮಂಜೂರು ಮಾಡಿಸಿದ್ದರು. ನಗರದ ಹೊಸ ಬಡಾವಣೆಗಳಲ್ಲಿ ಹಾಗೂ ಹಾಳಾಗಿರುವ ಕೆಲವು ಪ್ರದೇಶಗಳ ಹಳೆಯ ಒಳಚರಂಡಿ ವ್ಯವಸ್ಥೆಯನ್ನು ಬದಲಿಸಲು ₹52 ಕೋಟಿ ಮಂಜೂರಾಗಿದ್ದು ಕಾಮಗಾರಿ ಚಾಲನೆಯಲ್ಲಿದೆ. ನಗರೋತ್ಥಾನ ಯೋಜನೆಯಲ್ಲಿ ರಸ್ತೆಗಳ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.

ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ₹5 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ₹10-15 ಕೋಟಿ ಅವಶ್ಯಕತೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಚೊಕ್ಕರೆಡ್ಡಿಹಳ್ಳಿ ಸಮೀಪ ₹10 ಕೋಟಿ ವೆಚ್ಚದಲ್ಲಿ ಎಸ್.ಸಿ.ಪಿ ಟ್ರೀಟ್‌ಮೆಂಟ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ರಸ್ತೆಯ ಎಂಜಿನಿಯರಿಂಗ್ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಕ್ಕಲಿಗ ಸಂಘ, ಬಲಿಜಿಗ ಸಂಘ, ಯಾದವ ಸಂಘ, ವಿಶ್ವಕರ್ಮ ಸಂಘ, ಕನ್ನಡ ಸಂಘ ಸೇರಿದಂತೆ ವಿವಿಧ ಜನಾಂಗ ಮತ್ತು ಸಂಸ್ಥೆಗಳ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಸ್ಥಳ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.