ಚಿಂತಾಮಣಿ: ನಗರದ ಹೃದಯಭಾಗ ಅಜಾದ್‌ಚೌಕದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ರಥದ ಶೆಡ್ ಅನ್ನು ನಗರಸಭೆ ಸಿಬ್ಬಂದಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಮುಂಜಾನೆ ತೆರವುಗೊಳಿಸಿದರು.
ಪೊಲೀಸ್ ಇಲಾಖೆ ಬಲವಾದ ಬಂದೋಬಸ್ತ್ ಏರ್ಪಡಿಸಿತ್ತು. ಕಲ್ಲಿನ ಚಕ್ರಗಳುಳ್ಳ ರಥಕ್ಕೆ ಯಾವುದೇ ಧಕ್ಕೆಯಾಗದಂತೆ ಡೈಮಂಡ್ ಚಿತ್ರಮಂದಿರ ರಸ್ತೆಯಲ್ಲಿರುವ ಅದರ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಲಾಯಿತು.
ರಥವು ಶಿಥಿಲಗೊಂಡಿದ್ದು ಹೊಸ ರಥ ನಿರ್ಮಾಣ ಮಾಡಲು ದೇವಾಲಯದ ಟ್ರಸ್ಟ್ ತೀರ್ಮಾನಿಸಿತ್ತು. ಹೊಸ ರಥದ ಬಿಡಿ ಭಾಗಗಳನ್ನು ಜೋಡಿಸಿ ಅಂತಿಮ ರೂಪ ನೀಡುವ ಸಲುವಾಗಿ ಅಜಾದ್‌ಚೌಕದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಲಾಗಿತ್ತು. ರಥ ನಿರ್ಮಾಣದ ಕೆಲಸ ಪೂರ್ಣವಾದ ನಂತರ ಮೂಲ ಶೆಡ್‌ಗೆ ಸ್ಥಳಾಂತರಿಸದೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಶೆಡ್‌ನಲ್ಲೆ ಇತ್ತು.
ನಗರಸಭೆ ಅನುಮತಿ ಪಡೆಯದೆ ಕೆಲವರ ಕುಮ್ಮಕ್ಕಿನಿಂದ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ನ್ನೇ ಅಧಿಕೃತವಾಗಿಸಿಕೊಂಡಿದ್ದರು. ಶೆಡ್ ತೆರವುಗೊಳಿಸುವಂತೆ ನಗರಸಭೆ ಅನೇಕ ಬಾರಿ ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ.
ಉಪವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ಸುದರ್ಶನ ಯಾದವ್, ಡಿವೈಎಸ್ಪಿ ಪಿ.ಮುರಳೀಧರ್, ಪೌರಾಯುಕ್ತ ಜಿ.ಎನ್.ಚಲಪತಿ, ಬೆಸ್ಕಾಂ ಶಿವಶಂಕರ್, ಪೊಲೀಸ್ ಅಧಿಕಾರಿಗಳು, ನಗರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.