ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಅಧಿಕವಾದ ಫ್ಲೋರೊಸಿಸ್ ರೋಗ ತಪ್ಪಿಸಲು, ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬಾಗೇಪಲ್ಲಿ, ಗುಡಿಬಂಡೆ ಪಟ್ಟಣ, 120 ಗ್ರಾಮಗಳಿಗೆ ಚಿತ್ರಾವತಿ ಜಲಾಶಯದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಅಲ್ಲದೆ, ವಂಡಮಾನ್ ಜಲಾಶಯದಿಂದ 60 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಈಗಾಗಲೇ ಈ ಯೋಜನೆಗೆ ಅಳವಡಿಸಲಾದ ಪೈಪ್‌ಲೈನ್, ಸಿಸ್ಟನ್, ಓವರ್ ಹೆಡ್ ಟ್ಯಾಂಕ್‌ಗಳನ್ನು ದುರಸ್ತಿಗೊಳಿಸಬೇಕು.
ಚಿತ್ರಾವತಿ ಮತ್ತು ವಂಡಮಾನ್ ಜಲಾಶಯ ಯೋಜನೆಗಳ ಸಮಗ್ರ ಅನುಷ್ಠಾನದಿಂದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವ ಜೊತೆಗೆ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ ಎಂದು ಸ್ಥಳೀಯರು ಪ್ರತಿಪಾದಿಸುತ್ತಾರೆ. ಅಲ್ಲದೆ, ಎಚ್.ಎನ್. ವ್ಯಾಲಿಯ ಕೊಳಚೆ ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದು. ಈ ಯೋಜನೆಯನ್ನು ಕೈಬಿಡಬೇಕು ಎಂಬುದು ಸ್ಥಳೀಯರ ಆಗ್ರಹ.
ಬಯಲುಸೀಮೆಯ ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳು ಇಲ್ಲ. 1800 ಅಡಿಗಳು ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಕೆರೆ, ಕುಂಟೆ, ಕಾಲುವೆಗಳು, ರಾಜಕಾಲುವೆಗಳು ಬರಿದಾಗಿವೆ. ಅಂತರ್ಜಲದ ಮಟ್ಟ ಕುಸಿತ ಕಂಡಿರುವುದರಿಂದ, ಕೃಷಿಗೆ, ಕುಡಿಯುವ ನೀರಿಗೆ ಹಾಹಾಕಾರ ಸಮಸ್ಯೆ ಉಂಟಾಗಿದೆ.
ಚಿತ್ರಾವತಿ ಬ್ಯಾರೇಜಿನಿಂದ ನೀರು ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ಹರಿಯುತ್ತಿದೆ. ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಯಾವುದೇ ಯೋಜನೆ ಜಾರಿ ಮಾಡಿಲ್ಲ. 1998ರಲ್ಲಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಸರ್ಕಾರದ ಮೇಲೆ ಒತ್ತಡ ತಂಜು, ಚಿತ್ರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.
ಚಿತ್ರಾವತಿ ಜಲಾಶಯದಿಂದ ಒಂದು ಪೈಪ್‌ಲೈನ್‌ನಲ್ಲಿ ಮಾತ್ರ ನೀರು ಹರಿಯುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿಗೆ ಆಲಂ ಹಾಕಿ ಶುದ್ಧಿಕರಣ ಮಾಡಿದ ನಂತರ ಓವರ್‍ಹೆಡ್ ಟ್ಯಾಂಕ್ ಮೂಲಕ ಪಟ್ಟಣದ ವಾರ್ಡ್‍ಗಳ ಮನೆಗಳಿಗೆ ನೀರು ಹರಿಸಲಾಗುತ್ತಿದೆ. ಹಿಂದಿನ 20 ವರ್ಷಗಳಿಗೆ ಹೋಲಿಸಿದರೆ ಪಟ್ಟಣದ ಜನಸಂಖ್ಯೆ ಹೆಚ್ಚಾಗಿದೆ. ಸಮರ್ಪಕವಾಗಿ ಕುಡಿಯಲು ಹಾಗೂ ಗೃಹಬಳಕೆಗೆ ನೀರು ಸಿಗದೆ ಜನರು ನೀರಿಗಾಗಿ ಪರಿತಪಿಸುತ್ತಿದ್ದು, ಕ್ಯಾನ್ ನೀರು ಖರೀದಿಸುತ್ತಿದ್ದಾರೆ.
‘ಮತ್ತೊಂದೆಡೆ ಈ ಭಾಗದ ಜನರಿಗೆ ನೀರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 3 ಹಂತಗಳಲ್ಲಿ ಶುದ್ಧೀಕರಿಸಿದ ನೀರನ್ನು ಎಚ್.ಎನ್. ವ್ಯಾಲಿಯಿಂದ ತಾಲ್ಲೂಕಿನ ಕೆರೆಗಳಿಗೆ ಹರಿಸಲು ಮುಂದಾಗಿದೆ. ಆದರೆ, ಸಂಸ್ಕರಣೆ ಮಾಡಿದ ನೀರು ಜನರ ಬಳಕೆಗೆ ಯೋಗ್ಯವಲ್ಲ. ಕೊಳಚೆ ನೀರು ನಮಗೆ ಬೇಡ, ಚಿತ್ರಾವತಿ ಜಲಾಶಯದಿಂದ ನಮಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಇಲ್ಲವಾದರೆ, ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ’ ಎಂದು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿಯು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಚಿತ್ರಾವತಿ, ವಂಡಮಾನ್ ಜಲಾಶಯಗಳಿಂದ ನೀರು ಸರಬರಾಜು ಮಾಡಲು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ. ಅನಿಲ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.
ನಾನು ಶಾಸಕನಾಗಿದ್ದಾಗ ಚಿತ್ರಾವತಿಯಿಂದ 120 ಹಳ್ಳಿಗಳು ಮತ್ತು ವಂಡಮಾನ್ ಜಲಾಶಯದಿಂದ 60 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿತ್ತು. ಆದರೆ, ನಾನು ಸೋತ ಬಳಿಕ ಈ ಯೋಜನೆಗಳು ನನೆಗುದಿಗೆ ಬಿದ್ದವು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್. ಸಂಪಂಗಿ ತಿಳಿಸಿದರು.
ಚಿತ್ರಾವತಿಯಿಂದ ಬಾಗೇಪಲ್ಲಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಮೃತ್ ಯೋಜನೆಯಡಿ ₹17 ಕೋಟಿ ವೆಚ್ಚ ಮಾಡಿದೆ. ಎಚ್.ಎನ್. ವ್ಯಾಲಿಯಿಂದ ಕೆರೆಗಳಿಗೆ ನೀರು ಹರಿಸಲಾಗಿದ್ದು, ಅಂತರ್ಜಲದ ಮಟ್ಟ ವೃದ್ಧಿಯಾಗಲಿದೆ. ಚಿತ್ರಾವತಿ ಮತ್ತು ವಂಡಮಾನ್ ಜಲಾಶಯದಿಂದ ಒಟ್ಟು 180 ಹಳ್ಳಿಗಳಿಗೆ ನೀರು ಹರಿಸುವ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಚಿತ್ರಾವತಿ ವಂಡಮಾನ್ ಜಲಾಶಯಗಳಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಜನ ಜಾನುವಾರುಗಳಿಗೆ ನೀರು ಸಿಗುತ್ತದೆ ಎಂ.ಎಸ್.ನರಸಿಂಹಾರೆಡ್ಡಿ ಪ್ರಗತಿಪರ ರೈತ
ಚಿತ್ರಾವತಿ ವಂಡಮಾನ್ ಜಲಾಶಯಗಳಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಜನ ಜಾನುವಾರುಗಳಿಗೆ ನೀರು ಸಿಗುತ್ತದೆಎಂ.ಎಸ್.ನರಸಿಂಹಾರೆಡ್ಡಿ ಪ್ರಗತಿಪರ ರೈತ
ಅಧಿಕ ಫ್ಲೋರೈಡ್‌ನಿಂದ ಕೈಕಾಲುಗಳ ಕೀಲು ಬೆನ್ನು ಸೊಂಟ ನೋವು ಹೆಚ್ಚಾಗಿದೆ. ಹಣ ಕೊಟ್ಟು ಕುಡಿಯುವ ನೀರು ಪಡೆಯುವ ಅನಿವಾರ್ಯತೆ ಎದುರಾಗಿದೆ. ಇದನ್ನು ತಪ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಬೇಕುನಿರ್ಮಲಮ್ಮ ಶಾಶ್ವತ ನೀರಾವರಿ ಹೋರಾಟ ಸಮಿತಿ
- ನನೆಗುದಿಗೆ ಬಿದ್ದ ಯೋಜನೆ '
ಟ್ಟಣದಲ್ಲಿರುವ ಓವರ್ ಹೆಡ್ ಟ್ಯಾಂಕ್ 40 ವರ್ಷಗಳ ಹಿಂದಿನದ್ದಾಗಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಜೊತೆಗೆ ಪೈಪ್‌ಲೈನ್ ಸಹ ಸಮರ್ಪಕವಾಗಿಲ್ಲ. ಒಂದು ಪೈಪ್‌ಲೈನ್ ಮೂಲಕ ಸರದಿಯಂತೆ ವಾರಕ್ಕೊಮ್ಮೆ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುುತ್ತಿದೆ. 45 ಸಾವಿರ ಜನಸಂಖ್ಯೆಗೆ 8 ಓವರ್ ಹೆಡ್ ಟ್ಯಾಂಕ್ ಹಾಗೂ 3ರಿಂದ 5 ಪೈಪ್‍ಲೈನ್‌ನಲ್ಲಿ ನೀರು ಹರಿಸಲು ಯೋಜನೆ ಮಾಡಬೇಕು. ಪಟ್ಟಣದ ಜನರಿಗೆ ಮಾತ್ರ ಈಗ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಉಳಿದ 120 ಗ್ರಾಮಗಳು ಹಾಗೂ ಗುಡಿಬಂಡೆ ಪಟ್ಟಣಕ್ಕೆ ನೀರು ಹರಿಸಲು ಹಿಂದಿನ ಸರ್ಕಾರ ರೂಪಿಸಿದ್ದ ಯೋಜನೆ ನನೆಗುದಿಗೆ ಬಿದ್ದಿದೆ.
‘ಜನಪ್ರತಿನಿಧಿಗಳ ನಿರ್ಲಕ್ಷ್ಯ’
120 ಗ್ರಾಮಗಳಿಗೂ ನೀರು ಹರಿಸಲು ಓವರ್ ಹೆಡ್ ಟ್ಯಾಂಕ್ ಸಿಸ್ಟನ್ ಪೈಪ್‌ಲೈನ್ ಪಂಪ್ ಮೋಟರ್ ಜಾಕ್‌ವೆಲ್‌ಗಳನ್ನು ಹಿಂದಿನ ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಳವಡಿಸಿತ್ತು. ಈಗ ಪಂಪು ಮೋಟರ್ ಪೈಪುಗಳೇ ಇಲ್ಲ. ಓವರ್ ಹೆಡ್ ಟ್ಯಾಂಕ್ ಬಳಕೆಯಾಗದೆ ನಿರುಪಯುಕ್ತವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಈ ಯೋಜನೆ ವಿಫಲತೆಗೆ ಕಾರಣ. ಇದರಿಂದ ತಾಲ್ಲೂಕಿನ ಕಸಬಾ ಹೋಬಳಿಕ 120 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.