ADVERTISEMENT

‘ಇತಿಹಾಸ ತಿಳಿಸುವ ನಾಣ್ಯ, ನೋಟುಗಳು’

ಶಿಡ್ಲಘಟ್ಟ ಡಾಲ್ಫಿನ್‌ ಶಾಲೆಯಲ್ಲಿ ‘ಪ್ರಜಾವಾಣಿ 75’ ಅಮೃತ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 3:27 IST
Last Updated 29 ಡಿಸೆಂಬರ್ 2022, 3:27 IST
‘ಪ್ರಜಾವಾಣಿ 75’ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಶಿಡ್ಲಘಟ್ಟದ ಡಾಲ್ಫಿನ್ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ‘ವಿವಿಧ ದೇಶಗಳ ನಾಣ್ಯಗಳು ಮತ್ತು ನೋಟಗಳ ‍ಪ್ರದರ್ಶನ’ ಕಾರ್ಯಕ್ರಮವನ್ನು ತಾ.ಪಂ ಇಒ ಮುನಿರಾಜು ಉದ್ಘಾಟಿಸಿದರು
‘ಪ್ರಜಾವಾಣಿ 75’ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಶಿಡ್ಲಘಟ್ಟದ ಡಾಲ್ಫಿನ್ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ‘ವಿವಿಧ ದೇಶಗಳ ನಾಣ್ಯಗಳು ಮತ್ತು ನೋಟಗಳ ‍ಪ್ರದರ್ಶನ’ ಕಾರ್ಯಕ್ರಮವನ್ನು ತಾ.ಪಂ ಇಒ ಮುನಿರಾಜು ಉದ್ಘಾಟಿಸಿದರು   

ಶಿಡ್ಲಘಟ್ಟ: ‘ಹಳೇ ಕಾಲದ ನಾಣ್ಯ ಮತ್ತು ನೋಟುಗಳು ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು ಮೂಡಿಸುತ್ತವೆ. ಅಂದಿನ ಆರ್ಥಿಕ ಸ್ಥಿತಿ, ಐತಿಹಾಸಿಕ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತವೆ’ ಎಂದು ತಾಲ್ಲೂಕು ಪಂಚಾಯಿತಿಕಾರ್ಯ ನಿರ್ವಹಣಾಧಿಕಾರಿ ಜಿ. ಮುನಿರಾಜತಿಳಿಸಿದರು.

‘ಪ್ರಜಾವಾಣಿ 75’ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ನಗರದ ಡಾಲ್ಫಿನ್ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ‘ವಿವಿಧ ದೇಶಗಳ ನಾಣ್ಯಗಳು ಮತ್ತು ನೋಟುಗಳ ‍ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲು ವಸ್ತು ವಿನಿಮಯ ಪದ್ಧತಿ ಇತ್ತು. ನಂತರ ನಾಗರಿಕತೆಗಳು ಬೆಳವಣಿಗೆಯಾದಾಗ ನಾಣ್ಯಗಳು ಚಲಾವಣೆಗೆ ಬಂದವು. ಕ್ರಿಸ್ತ ಪೂರ್ವದಲ್ಲಿಯೇ ನಾಣ್ಯಗಳು ಚಲಾವಣೆಯಲ್ಲಿದ್ದವು ಎಂದರು.

ADVERTISEMENT

ಮಕ್ಕಳು ಪ್ರತಿ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ವಿವಿಧ ದೇಶಗಳ ನಾಣ್ಯಗಳು, ನೋಟುಗಳು ಮಕ್ಕಳಲ್ಲಿ ವಿಸ್ಮಯವನ್ನು ಹುಟ್ಟಿಸುತ್ತದೆ. ನಮ್ಮ ದೇಶದಲ್ಲಿ ಬಳಕೆಯಲ್ಲಿದ್ದ ರಾಜ ಮಹಾರಾಜರ ಕಾಲದ ನಾಣ್ಯಗಳು, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ನೋಟುಗಳು, ವಿವಿಧ ದೇಶಗಳ ನಾಣ್ಯಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಒಳ್ಳೆಯ ಬೆಳವಣಿಗೆ ಎಂದರು.

ನಾಣ್ಯಗಳು ಲೋಹವಷ್ಟೇ ಅಲ್ಲ. ಇತಿಹಾಸ, ಅಂದಿನ ಆರ್ಥಿಕ ಪರಿಸ್ಥಿತಿ ಹೇಳುತ್ತವೆ. ಇಂದು ಪ್ರತಿಯೊಬ್ಬರ ಬಳಿ ಕಾಗದದ ನೋಟುಗಳಿವೆ. ಅಂದು ಬಂಗಾರ, ಬೆಳ್ಳಿ ನಾಣ್ಯಗಳನ್ನು ಬಳಸುತ್ತಿದ್ದರು. ಅಷ್ಟು ಸಂಪದ್ಬರಿತವಾಗಿ ನಾಡು ಇತ್ತು.ನಾಗರಿಕತೆಗಳು ಬೆಳೆದು ಬಂದ ಕ್ಷಣಗಳು, ಲಾಂಛನಗಳು ಹೀಗೆ ನಾನಾ ವಿಷಯಗಳನ್ನು ನಾಣ್ಯಗಳು ಹೇಳುತ್ತವೆ. ಅವುಗಳ ಇತಿಹಾಸವನ್ನು ಮಕ್ಕಳು ತಿಳಿಯಬೇಕಿದೆ ಎಂದು ಹೇಳಿದರು.

ಯಾವುದೇ ವೃತ್ತಿಯನ್ನು ಪ್ರೀತಿಯಿಂದ ಮಾಡಿದರೆ ಕಷ್ಟ ಎನಿಸುವುದಿಲ್ಲ. ಉತ್ತಮ ವ್ಯಾಸಂಗದ ಮೂಲಕ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದ ಡಾಲ್ಫಿನ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಒಂದಲ್ಲಾ ಒಂದು ಹವ್ಯಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಗುರಿ ಇಟ್ಟುಕೊಳ್ಳಬೇಕು. ಯಾವುದೇ ಗುರಿಯನ್ನು ತಲುಪಲು ಶ್ರಮ ಅತಿಮುಖ್ಯವಾಗಿದೆ ಎಂದರು.

ಗುರಿಯೊಂದಿಗೆ ಮುನ್ನಡೆದರೆ ಸಾಧನೆ ಸಾಧ್ಯ. ಬೆಳವಣಿಗೆಯ ಹಂತಗಳಲ್ಲಿ ಗುರಿಗಳ ಬದಲಾವಣೆಯತ್ತ ಮನಸ್ಸು ಹೊರಳುವುದು ಸಹಜ. ಆದರೆ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು. ಗುರಿ ಸಾಧನೆಗೆ ‍ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಅನಂತಕೃಷ್ಣ ಮಾತನಾಡಿ, ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದೆ. ಅದೇ ರೀತಿ
‘ಪ್ರಜಾವಾಣಿ’ ಸಹ ಅಮೃತ ಮಹೋತ್ಸವ ಆಚರಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ಇತಿಹಾಸ, ಸಾಹಿತ್ಯದ ಅರಿವು ಹೊಂದಬೇಕು. ಇದು ವ್ಯಕ್ತಿತ್ವ ರೂಪಿಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.

ವಿವಿಧ ಕಾಲಘಟ್ಟದ ದೇಶ ಮತ್ತು ವಿದೇಶಗಳ ನೋಟು ಮತ್ತು ನಾಣ್ಯಗಳನ್ನು ಪ್ರದರ್ಶಿಸಿದ ವಿಜಯಪುರದ ಡಿ.ಕೇಶವಮೂರ್ತಿ ಅವರನ್ನು ಗಣ್ಯರು ಸನ್ಮಾನಿಸಿದರು. ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೌತಾಜ್, ಜಾನಪದ ಸಾಹಿತ್ಯ ಪರಿಷತ್ ಅ ಧ್ಯಕ್ಷ ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷಚಂದ್ರಶೇಖರ ಹಡಪದ್,ಜಿಲ್ಲಾ ಕಸಾಪ ಪ್ರತಿನಿಧಿ ಸತೀಶ್, ಸದಸ್ಯ ಹಿತ್ತಲಹಳ್ಳಿ ಮುನಿರಾಜು, ಡಾಲ್ಫಿನ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಚಂದನಾ ಅಶೋಕ್, ಸಿಇಒ ಮುನಿಶಾಮಪ್ಪ, ಶಿಕ್ಷಕರಾದ ರಾಮಾಂಜಿ, ಭರತ್ ಹಾಗೂಎನ್.ಸಿ.ಸಿ ವಿದ್ಯಾರ್ಥಿಗಳು ಹಾಜರಿದ್ದರು.

ಕನ್ನಡಿಗರ ಹೆಮ್ಮೆ ‘ಪ್ರಜಾವಾಣಿ’

‘ಪ್ರಜಾವಾಣಿ’ ನಾಡು, ನುಡಿಯ ವಿಚಾರದಲ್ಲಿ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾಗಿದೆ.ಪತ್ರಿಕೆಯನ್ನು ನಾನು ಹಲವು ವರ್ಷಗಳಿಂದ ಓದುತ್ತಿದ್ದೇನೆ. ಅಂಕಣಗಳು ಇಷ್ಟ. ವಸ್ತುನಿಷ್ಠವಾಗಿ ಮತ್ತು ನೈಜ ವರದಿಗಳು ಪ್ರಕಟವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಓದಿಗೂ ಪತ್ರಿಕೆ ಅನುಕೂಲವಾಗಲಿದೆ. ‘ಪ್ರಜಾವಾಣಿ’ಯು 100 ವರ್ಷಗಳನ್ನು ದಾಟಲಿ ಎಂದುತಾ.ಪಂ ಇಒ ಮುನಿರಾಜ ಶುಭಕೋರಿದರು.

ಕುತೂಹಲ ಮೂಡಿಸಿದ ಪ್ರದರ್ಶನ

ವಿವಿಧ ಕಾಲಘಟ್ಟಗಳ ನಾಣ್ಯಗಳು ಮತ್ತು ನೋಟುಗಳನ್ನು ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ವೀಕ್ಷಿಸಿದರು. ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಇಲ್ಲಿದ್ದವು. ‘ಎ ಯಿಂದ ಝಡ್’ವರೆಗೆ ಎನ್ನುವ ಪರಿಕಲ್ಪನೆಯಲ್ಲಿ ಪ್ರಪಂಚದ ಬಹುತೇಕ ದೇಶಗಳ ನೋಟುಗಳು ಈ ಪ್ರದರ್ಶನದಲ್ಲಿ ಇದ್ದವು. ಮಕ್ಕಳು ನಾಣ್ಯ ಮತ್ತು ನೋಟುಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಪ್ರಶ್ನೆಗಳನ್ನು ಹಾಕುತ್ತಿದ್ದರು.

ವಿದ್ಯಾರ್ಥಿಗಳಷ್ಟೇ ಅಲ್ಲ ಗಣ್ಯರು ಸಹ ಪ್ರದರ್ಶನದಲ್ಲಿದ್ದ ನಾಣ್ಯ, ನೋಟಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಶವಮೂರ್ತಿ ಅವರು 1984ರಿಂದ ನಾಣ್ಯ ಮತ್ತು ನೋಟಗಳ ಸಂಗ್ರಹದ ಕಾಯಕದಲ್ಲಿ ತೊಡಗಿದ್ದಾರೆ. ಇದು ಅವರ 15ನೇ ಪ್ರದರ್ಶನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.