ADVERTISEMENT

ಅಕ್ರಮಗಳನ್ನು ಮಟ್ಟಹಾಕಲು ಸಹಕರಿಸಿ

ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್‌ಸ್ಪೆಕ್ಟರ್‌ ಎನ್‌.ಎಲ್‌. ನಾಗೇಂದ್ರಪ್ರಸಾದ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 11:15 IST
Last Updated 22 ಜುಲೈ 2018, 11:15 IST
ತರಬೇತಿ ಶಿಬಿರದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್‌ಸ್ಪೆಕ್ಟರ್‌ ಎನ್‌.ಎಲ್‌. ನಾಗೇಂದ್ರಪ್ರಸಾದ್‌ ನಾಗರಿಕರಿಗೆ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಶಿಬಿರದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್‌ಸ್ಪೆಕ್ಟರ್‌ ಎನ್‌.ಎಲ್‌. ನಾಗೇಂದ್ರಪ್ರಸಾದ್‌ ನಾಗರಿಕರಿಗೆ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದರು.   

ಚಿಕ್ಕಬಳ್ಳಾಪುರ: ‘ಬಂದೂಕು ತರಬೇತಿ ಪಡೆದ ನಾಗರಿಕರು ಪೊಲೀಸ್‌ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಬೇಕು’ ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್‌ಸ್ಪೆಕ್ಟರ್‌ ಎನ್‌.ಎಲ್‌. ನಾಗೇಂದ್ರಪ್ರಸಾದ್‌ ತಿಳಿಸಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಬಂದೂಕುಗಳ ವೈವಿಧ್ಯತೆ, ನಿರ್ವಹಣೆ, ಗುಂಡು ಹಾರಿಸುವ ರೀತಿಯನ್ನು ವಿವರಿಸುತ್ತ ಅವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.

‘ತರಬೇತಿ ಶಿಬಿರದಲ್ಲಿ ನೀಡುವ ಪ್ರಮಾಣ ಪತ್ರವಿದ್ದರೆ ಮಾತ್ರ ಬಂದೂಕು ಖರೀದಿಸಲು ಪರವಾನಗಿ ದೊರೆಯಲಿದೆ. ಪೊಲೀಸ್ ಇಲಾಖೆಯು ಬಂದೂಕು ತರಬೇತಿ ಪಡೆದ ನಾಗರಿಕರ ಸಹಕಾರವನ್ನು ಬಯಸುತ್ತಿದ್ದು ತರಬೇತಿ ಪಡೆದವರು ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿ, ಅಕ್ರಮ, ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ADVERTISEMENT

‘ಬಂದೂಕು ಖರೀದಿಸುವವರು ಮಕ್ಕಳು, ಅಪರಿಚಿತರ ಕೈಗೆ ಸಿಗದಂತೆ ಎಚ್ಚರವಹಿಸಬೇಕು. ನಿಯಮಿತವಾಗಿ ಪರವಾನಗಿ ನವೀಕರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ತರಬೇತಿ ಸಂದರ್ಭ ಅಭ್ಯರ್ಥಿಗಳು ಗಂಭೀರವಾಗಿರುವ ಜತೆಗೆ ಎಚ್ಚರಿಕೆಯಿಂದ ಕೋವಿ ಬಳಸಬೇಕು. ಇದಕ್ಕೆ ಸಮಯ ಪಾಲನೆ ಹಾಗೂ ಶಿಸ್ತನ್ನು ಕಾಪಾಡಿಕೊಳ್ಳುವ ಅಗತ್ಯವಿದೆ’ ಎಂದರು.

ಶಿಬಿರದಲ್ಲಿ ಬಂದೂಕಿನ ಸ್ವರೂಪ, ಗುಂಡಿನ ರೂಪುರೇಷೆ ಮತ್ತು ಸಾಮರ್ಥ್ಯ, ಬಂದೂಕಿನ ನಿರ್ವಹಣೆ, ಗುರಿಯನ್ನು ಸಾಧಿಸಲು ಅನುಸರಿಸಬೇಕಾದ ಕ್ರಮಗಳು, ಬಂದೂಕನ್ನು ಶರೀರದ ಒಂದು ಅಂಗದಂತೆ ಬಳಕೆ ಮಾಡುವ ರೀತಿ ನೀತಿಗಳ ಬಗ್ಗೆ ಅವರು ಪ್ರಾತ್ಯಕ್ಷಿಕೆ ನೀಡಿದರು.

ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣಾರೆಡ್ಡಿ, ಮುಖ್ಯ ಪೇದೆಗಳಾದ ಸಂತೋಷ್‌, ನಾಗರಾಜ, ಲಕ್ಷ್ಮೀನಾರಾಯಣ್‌ ಮತ್ತು ಶಿವಕುಮಾರ್‌ ಕವಾಯತು ಹಾಗೂ ದೈಹಿಕ ಶಿಕ್ಷಣದ ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.