ಶಿಡ್ಲಘಟ್ಟ: ಕೆಂಪು, ನೀಲಿ, ನೇರಳೆ, ಕಪ್ಪು ಬಣ್ಣದ ಜೋಳ. ಇವು ಬಿಳಿ ಅಥವಾ ಹಳದಿ ಜೋಳದ ಮೇಲೆ ಕೃತಕವಾಗಿ ಬಣ್ಣ ಬಳಿದ ಪ್ರಭೇದಗಳಲ್ಲ. ಈ ರೀತಿಯ ಬಣ್ಣ ಹೊಂದಿರುವ ಜೋಳವೂ ಇದೆ. ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್ ಇವುಗಳನ್ನು ಬೆಳೆದಿದ್ದಾರೆ.
ಈಗೀಗ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಇವನ್ನು ಹುರಿದು, ಬೇಯಿಸಿ ಮಾಡಿರುವ ತಿನಿಸುಗಳನ್ನು ‘ಸೂಪರ್-ಫುಡ್’ ಎಂದು ಕರೆಯುತ್ತಾರೆ.
ಮೆಕ್ಸಿಕೋ ಮತ್ತು ಪೆರು ದೇಶಗಳ ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಬಣ್ಣಗಳ ಏಳು ಮೆಕ್ಕೆಜೋಳದ ತಳಿಗಳನ್ನು ತಾಲ್ಲೂಕಿನ ರೈತ ಎ.ಎಂ.ತ್ಯಾಗರಾಜ್ ಬೆಳೆದು ಯಶಸ್ಸು ಕಂಡಿದ್ದಾರೆ. ಇದೀಗ ಬೆಳೆ ಕಟಾವು ಮಾಡಲಾಗುತ್ತಿದೆ. ಕಡುಗೆಂಪು, ಕೆಂಪು, ನೇರಳೆ, ಹಳದಿ ಮತ್ತು ಕೆಂಪು- ಕಪ್ಪು ಮಿಶ್ರಿತ ಜೋಳದ ಕಾಳುಗಳನ್ನು ಹೊಂದಿರುವ ತೆನೆಗಳನ್ನು ನೋಡಲು ಸುತ್ತಮುತ್ತಲಿನ ರೈತರು ಬರುತ್ತಿದ್ದಾರೆ.
ರೈತ ಎ.ಎಂ.ತ್ಯಾಗರಾಜ್ ಈ ರೀತಿಯ ಜೋಳದ ತಳಿಗಳ ಎರಡೆರಡು ಬಿತ್ತನೆ ಬೀಜದ ತೆನೆಗಳನ್ನು ಸ್ನೇಹಿತ ಗಂಗಾವತಿಯ ಲಕ್ಷ್ಮಣ್ ಮತ್ತು ಅಮೆರಿಕದ ಬಸವರಾಜ್ ಅವರಿಂದ ತರಿಸಿಕೊಂಡಿದ್ದಾರೆ. ಹತ್ತು ಗುಂಟೆ ಜಮೀನಿನಲ್ಲಿ ನಾಲ್ಕು ತಿಂಗಳ ಹಿಂದೆ ನಾಟಿ ಮಾಡಿದ್ದ ಇವರು, ಸ್ಥಳೀಯವಾಗಿ ಬೆಳೆಯುವ ಮೆಕ್ಕೆಜೋಳದಂತೆ ಈ ವಿಶೇಷ ತಳಿಯ ಜೋಳವನ್ನು ಬೆಳೆಸಿದ್ದಾರೆ.
ಈ ಜೋಳಕ್ಕೆ ರಸಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಹಾಕಿದ್ದಾರೆ. ನಾಲ್ಕಾರು ತೆನೆಯಲ್ಲಿನ ಕಾಳುಗಳನ್ನು ನಾಟಿ ಮಾಡಿದ್ದ ರೈತನಿಗೆ ಇದೀಗ ಸುಮಾರು 150 ಕೆ.ಜಿಯಷ್ಟು ಇಳುವರಿ ಬಂದಿದೆ.
ಈ ರೀತಿಯ ಜೋಳಗಳನ್ನು ಸುಮಾರು 3ಸಾವಿರ ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಿದ್ದರು ಎಂಬುದಕ್ಕೆ ದಾಖಲೆ ಸಿಗುತ್ತವೆ. ಮೆಕ್ಸಿಕೋ ದೇಶದಲ್ಲಿ ಕ್ರಿ.ಶ 1330 ರಿಂದ 1521ರವರೆಗೆ ಇದ್ದ ಅಜಟೆಕ್ ಜನಾಂಗದವರ ಮುಖ್ಯ ಆಹಾರವಾಗಿದ್ದ ಈ ಜೋಳದ ತಳಿಗಳು, ದಕ್ಷಿಣ ಅಮೆರಿಕದ ವಿವಿಧ ದೇಶಗಳಲ್ಲಿ ಈಗಲೂ ಆಹಾರ ಹಾಗೂ ಪಾನೀಯದ ರೂಪದಲ್ಲಿ ಬಳಕೆಯಲ್ಲಿವೆ.
ನಮ್ಮ ದೇಶದ ಮಿಜೋರಾಮ್ ರಾಜ್ಯದಲ್ಲಿ ಈ ಬಣ್ಣದ ಜೋಳಗಳನ್ನು ಬೆಳೆಯುತ್ತಾರೆ ಮತ್ತು ಆಹಾರವಾಗಿ ಬಳಸುತ್ತಾರೆ. ಮಿಜೋರಾಮ್ ಜನರು ಇವನ್ನು ಮಿಮ್‌ಬಾನ್ (ಜಿಗುಟಾದ ಜೋಳ) ಎಂದು ಕರೆಯುತ್ತಾರೆ. ಈ ಪ್ರಭೇದಗಳು ಸಿಹಿ ಮತ್ತು ಒಗರಿನ ರುಚಿಯನ್ನು ಹೊಂದಿದ್ದು, ಬೇಯಿಸಿದಾಗ ರುಚಿ ಹೆಚ್ಚುತ್ತದೆ. ಫೀನಾಲಿಕ್ ಮತ್ತು ಆಂಥೋಸಯಾನಿನ್‌ಗಳು ಅವುಗಳ ವಿಶಿಷ್ಟ ಬಣ್ಣಕ್ಕೆ ಕಾರಣವಾಗಿವೆ ಮತ್ತು ಅವುಗಳ ಪ್ರಮಾಣವನ್ನು ಅವಲಂಬಿಸಿ ಬಣ್ಣಗಳನ್ನು ಪಡೆದುಕೊಳ್ಳುತ್ತವೆ.
ಪೋಷಕಾಂಶಗಳ ಆಗರ: ಮೆಕ್ಸಿಕೋ ಮತ್ತು ಪೆರು ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ವಿವಿಧ ಬಣ್ಣಗಳ ಮೆಕ್ಕೆಜೋಳಗಳು ಪೋಷಕಾಂಶಗಳ ಆಗರ. ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಹೊಂದಿದೆ. ರಕ್ತ ಹೀನತೆ ತಡೆಗಟ್ಟುತ್ತದೆ. ಇದನ್ನು ಸೇವಿಸುವುದರಿಂದ ದೇಹದಾರ್ಢ್ಯತೆ ಹೆಚ್ಚಾಗುತ್ತದೆ. ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಸೇರಿದಂತೆ ಜೀವಸತ್ವಗಳಾದ ವಿಟಮಿನ್ ಎ, ವಿಟಮಿನ್ ಬಿ ಈ ಜೋಳದಲ್ಲಿವೆ.
ರೈತ ಎ.ಎಂ.ತ್ಯಾಗರಾಜ್ ಮಾತನಾಡಿ, ‘ಈ ಮೆಕ್ಕೆಜೋಳ ನಾಲ್ಕು ತಿಂಗಳಿಗೆ ಕಟಾವು ಹಂತಕ್ಕೆ ಬಂದಿದೆ. ಸ್ಥಳೀಯ ಮೆಕ್ಕೆಜೋಳದಲ್ಲಿ ಒಂದು ಗಿಡಕ್ಕೆ ಒಂದು ದೊಡ್ಡ ತೆನೆ ಮಾತ್ರ ಬಿಡುತ್ತದೆ. ಆದರೆ, ಈ ವಿದೇಶ ಜೋಳದ ತಳಿ ಗಿಡಕ್ಕೆ ಎರಡರಿಂದ ಮೂರು ತೆನೆ ಬಿಡುತ್ತದೆ. ಹೀಗಾಗಿ ಇಳುವರಿಯೂ ಹೆಚ್ಚಿದೆ. ತಳಿ ಅಭಿವೃದ್ಧಿ ಮಾಡಿ, ನಮ್ಮ ಭಾಗದ ರೈತರಿಗೆ ಇವುಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶ. ಮಾರುಕಟ್ಟೆಯಲ್ಲಿ ಸಹ ಇವುಗಳಿಗೆ ಬೇಡಿಕೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.