ADVERTISEMENT

ಚಿಕ್ಕಬಳ್ಳಾಪುರದಲ್ಲಿ ಶೀಘ್ರವೇ ಗ್ರಾಹಕರ ವೇದಿಕೆ ಕಾರ್ಯಾರಂಭ

ತಾಲ್ಲೂಕಿನ ಚದುಲಪುರ ಬಳಿಯ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಕಚೇರಿ ಸಜ್ಜು, ಅಧ್ಯಕ್ಷರು ಮತ್ತು ಅಗತ್ಯ ಸಿಬ್ಬಂದಿ ನೇಮಕ, ಮಾರ್ಚ್ 7 ರಂದು ಉದ್ಘಾಟನೆ

ಈರಪ್ಪ ಹಳಕಟ್ಟಿ
Published 3 ಮಾರ್ಚ್ 2020, 19:30 IST
Last Updated 3 ಮಾರ್ಚ್ 2020, 19:30 IST
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಇರುವ ಚದುಲಪುರ ಬಳಿಯ ರೇಷ್ಮೆ ಇಲಾಖೆ ಕಟ್ಟಡ
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಇರುವ ಚದುಲಪುರ ಬಳಿಯ ರೇಷ್ಮೆ ಇಲಾಖೆ ಕಟ್ಟಡ   

ಚಿಕ್ಕಬಳ್ಳಾಪುರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಚದಲುಪುರ ಕ್ರಾಸ್‌ ಸಮೀಪದ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಕಚೇರಿ ಕಾರ್ಯಾರಂಭಕ್ಕೆ ಸಿದ್ಧಗೊಂಡಿದ್ದು, ಇದೇ ಮಾರ್ಚ್‌ 7 ರಂದು ವೇದಿಕೆ ಉದ್ಘಾಟನೆಯಾಗಲಿದೆ.

ಇದರಿಂದಾಗಿ ಇನ್ನು ಮುಂದೆ ಜಿಲ್ಲೆಯ ಗ್ರಾಹಕರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡಲು ದೂರದ ಕೋಲಾರಕ್ಕೆ ಅಲೆಯಬೇಕಿಲ್ಲ. ಸ್ಥಳೀಯವಾಗಿಯೇ ವ್ಯಾಜ್ಯಕ್ಕೆ ಪರಿಹಾರ ಪಡೆಯಬಹುದು.

ನೆರೆ ಕೋಲಾರದಿಂದ ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಬೇರ್ಪಟ್ಟು 12 ವರ್ಷಗಳು ಗತಿಸಿದರೂ ಜಿಲ್ಲೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಂಜೂರಾಗಿರಲಿಲ್ಲ. ಈ ಬಗ್ಗೆ ವಕೀಲರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮೇಲಿಂದ ಮೇಲೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರು. ಕಳೆದ ಮೇ 22 ರಂದು ಮೈತ್ರಿ ಸರ್ಕಾರದ ಸಚಿವ ಸಂಪುಟ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ವೇದಿಕೆ ಆರಂಭಕ್ಕೆ ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ತ್ವರಿತಗತಿಯಲ್ಲಿ ರಾಮನಗರದಲ್ಲಿ ವೇದಿಕೆ ಕಾರ್ಯಾರಂಭ ಮಾಡಿತ್ತು.

ADVERTISEMENT

ಜಿಲ್ಲೆಯಲ್ಲಿ ವೇದಿಕೆ ಕಚೇರಿಗಾಗಿ ನಗರದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯ ಹಳೆಯ ಕಟ್ಟಡ ಮತ್ತು ಜಿಲ್ಲಾಡಳಿತ ಭವನದಲ್ಲಿ ಸ್ಥಳ ಹುಡುಕಾಟ ನಡೆಸಲಾಯಿತು. ಶಿಥಿಲ ಕಟ್ಟಡ, ಸ್ಥಳಾವಕಾಶ ಕೊರತೆ ಕಾರಣಗಳಿಗೆ ಅಂತಿಮವಾಗಿ ಚದಲುಪುರ ಸಮೀಪದ ರೇಷ್ಮೆ ಇಲಾಖೆ ಕಟ್ಟಡದಲ್ಲಿ ವೇದಿಕೆ ಕಚೇರಿ ತೆರೆಯುವ ತೀರ್ಮಾನಕ್ಕೆ ಬರಲಾಗಿತ್ತು.

ವೇದಿಕೆ ಕಚೇರಿಯ ನವೀಕರಣ ಕಾರ್ಯಕ್ಕಾಗಿ ಜಿಲ್ಲಾಡಳಿತ ಸುಮಾರು ₹8 ಲಕ್ಷ ಮಂಜೂರು ಮಾಡಿ, ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿತ್ತು. ಕಳೆದ ಕೆಲ ತಿಂಗಳಲ್ಲಿ ಭರದಿಂದ ನವೀಕರಣ ಕಾರ್ಯ ನಡೆದು ಸದ್ಯ ಉದ್ಘಾಟನೆಗೆ ಕಚೇರಿ ಸಜ್ಜುಗೊಂಡಿದೆ.

ಇನ್ನೊಂದೆಡೆ, ತುಮಕೂರಿನ ವಕೀಲ ಶ್ರೀನಿವಾಸಯ್ಯ ಅವರನ್ನು ವೇದಿಕೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಜತೆಗೆ ನ್ಯಾಯಾಂಗೇತರ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತರು ಸೇರಿದಂತೆ ಸುಮಾರು ಆರೇಳು ಸಿಬ್ಬಂದಿಯನ್ನು ವೇದಿಕೆ ಸೇವೆಗೆ ನಿಯೋಜಿಸಲಾಗಿದೆ.

ಮಾ.7 ರಂದು ನೂತನ ಜಿಲ್ಲಾ ವೇದಿಕೆಯ ಕಚೇರಿಯನ್ನು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ, ನ್ಯಾಯಮೂರ್ತಿ ಹುಲವಾಡಿ ಜಿ.ರಮೇಶ್‌ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.