ಚಿಕ್ಕಬಳ್ಳಾಪುರ: ‘ಶಾಸಕ ಪ್ರದೀಪ್ ಈಶ್ವರ್ ಧೋರಣೆಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ದಿವಾಳಿ ಆಗುತ್ತಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಗಮನವಿಡಲು ಕೆಪಿಸಿಸಿಯಿಂದ ಒಬ್ಬರು ವೀಕ್ಷಕರನ್ನು ನೇಮಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಅವರಿಗೆ ಸ್ವಪಕ್ಷೀಯ ಮುಖಂಡರು ಮೂರು ಪುಟಗಳ ದೂರು ಸಲ್ಲಿಸಿದ್ದಾರೆ.
ಮಾಜಿ ಶಾಸಕರು, ಜಿ.ಪಂ ಮಾಜಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಸೇರಿದಂತೆ ಕ್ಷೇತ್ರದ ಪ್ರಮುಖ ನಾಯಕರು ಶಾಸಕರ ನಿಲುವುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಕೈಗೆ ಪ್ರದೀಪ್ ಈಶ್ವರ್ ಸಿಗುತ್ತಿಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುತ್ತಿಲ್ಲ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ, ಪಿಎಲ್‌ಡಿ ಬ್ಯಾಂಕ್ ಚುನಾವಣೆ, ಟಿಎಪಿಸಿಎಂಎಸ್ ಚುನಾವಣೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ಸಹ ತೆಗೆದುಕೊಳ್ಳಲಿಲ್ಲ. ಈ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತರು. ಪಕ್ಷಕ್ಕೆ ಕೆಲಸ ಮಾಡದವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಡಾ.ಕೆ.ಸುಧಾಕರ್ ಸೋಲಿಗೆ ಕಾರಣರಾದ ಮುಖಂಡರನ್ನೇ ನಿರ್ಲಕ್ಷಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಗಮನಕ್ಕೂ ತಂದಿದ್ದೇವೆ. ‘ನಾನು ಯಾರ ಮಾತಿಗೂ ಗಮನ ನೀಡುವುದಿಲ್ಲ’ ಎಂದು ಪ್ರದೀಪ್ ಈಶ್ವರ್ ಉಡಾಫೆ ಉತ್ತರ ನೀಡಿದ್ದಾರೆ.
ಕೆಪಿಸಿಸಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೀಕ್ಷಕರನ್ನು ನೇಮಿಸಿ, ಹಿರಿಯ ಮುಖಂಡರ ಸಮಿತಿ ರಚಿಸಬೇಕು. ಹಳೇ ನೇಮಕಾತಿಗಳನ್ನು ರದ್ದುಪಡಿಸಬೇಕು. ಸರ್ಕಾರಿ ನಾಮನಿರ್ದೇಶನ ಮತ್ತು ಬ್ಲಾಕ್ ಕಾಂಗ್ರೆಸ್ ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಿ ಪಕ್ಷವನ್ನು ಉಳಿಸಿ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.