ADVERTISEMENT

ಪರಿಶಿಷ್ಟ ಬಾಲಕನ ಮೇಲೆ ಹಲ್ಲೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 4:49 IST
Last Updated 1 ಅಕ್ಟೋಬರ್ 2022, 4:49 IST

ಚಿಕ್ಕಬಳ್ಳಾಪುರ: ಕಳ್ಳತನ ಆರೋಪ ಸಂಬಂಧ ಜಿಲ್ಲೆಯ ಗ್ರಾಮವೊಂದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 14 ವರ್ಷದ ಬಾಲಕನ ಮೇಲೆ ನಡೆಸಿರುವ ಹಲ್ಲೆಯನ್ನು ಮಾದಿಗ ದಂಡೋರ ಖಂಡಿಸಿದೆ.

ಕಳ್ಳತನ ಆರೋಪದ ಮೇಲೆ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ. ಹಲ್ಲೆ ತಡೆಯಲು ಮುಂದಾದ ಆತನ ತಾಯಿ ಮೇಲೂ ಹಲ್ಲೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಸಂಬಂಧ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಬಾಲಕ ತಪ್ಪು ಮಾಡಿದ್ದರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕಿತ್ತು. ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಮಾದಿಗ ದಂಡೋರದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ದೇವರಾಜ್ ಒತ್ತಾಯಿಸಿದ್ದಾರೆ.

ADVERTISEMENT

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ತಾಯಿಯ ಆರೋಗ್ಯ ವಿಚಾರಿಸಿದರು. ಆರೋಪಿಗಳ ವಿರುದ್ಧ ಕ್ರಮಕೈಗೊಂಡು ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿ ದೂರು ದಾಖಲಾಗಿಲ್ಲ: ಗ್ರಾಮದ ನಾಲ್ಕು ವರ್ಷದ ಮಗು ಮನೆಯ ಬಳಿ ಆಟವಾಡುತ್ತಿತ್ತು. ಗುರುವಾರ ಸಂಜೆ ಆ ಮಗುವನ್ನು ಅಪಹರಿಸಿಕೊಂಡು ಬೆಟ್ಟಕ್ಕೆ ಹೋಗಿದ್ದಾನೆ. ಅಲ್ಲಿ ಮಗುವಿನ ಬಾಯಿಗೆ ಬಟ್ಟೆ ತುರುಕಿ ಕತ್ತಿನಲ್ಲಿದ್ದ ಬಂಗಾರ ಸರ, ಓಲೆಗಳುಹಾಗೂ ಬೆಳ್ಳಿಯ ಕಾಲು ಚೈನ್ ಕಿತ್ತುಕೊಂಡು ಸಾಯಿಸಲು ಪ್ರಯತ್ನಿಸಿದ್ದಾನೆ. ಆಗ ಬೆಟ್ಟದ ಬಳಿ ವಾಸವಾಗಿರುವವರು ಕಿರುಚಿಕೊಂಡಾಗ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ 14 ವರ್ಷದ ಬಾಲಕನ ವಿರುದ್ಧ ಪ್ರತಿದೂರು ನೀಡಿದ್ದು ಇನ್ನೂ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.