ADVERTISEMENT

ಸಂಸದ ಬಚ್ಚೇಗೌಡ ಹೇಳಿಕೆಗೆ ಖಂಡನೆ

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಶೇ 50:50ರ ಅನುಪಾತದಲ್ಲಿ ನೀರು ಹರಿಸಲು ಕಾಂಗ್ರೆಸ್ ಮುಖಂಡರ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 11:07 IST
Last Updated 12 ಅಕ್ಟೋಬರ್ 2019, 11:07 IST
ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆಪ್ತ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆಪ್ತ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಜಕ್ಕಲಮಡುಗು ಜಲಾಶಯದ ನೀರನ್ನು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಶೇ 50:50ರ ಅನುಪಾತದಲ್ಲಿ ಹರಿಸಲಾಗುತ್ತದೆ ಎಂಬ ಸಂಸದ ಬಿ.ಎನ್.ಬಚ್ಚೇಗೌಡರ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ‘ಚಿಕ್ಕಬಳ್ಳಾಪುರದ ಜಕ್ಕಲಮಡುಗು ನೀರಿನ ವಿಚಾರದಲ್ಲಿ ಸಂಸದ ಬಚ್ಚೇಗೌಡರು ನೀಡಿರುವ ಹೇಳಿಕೆ ಅವೈಜ್ಞಾನಿಕವಾಗಿದೆ. ದೊಡ್ಡಬಳ್ಳಾಪುರ ಕೇವಲ ತಾಲ್ಲೂಕು ಕೇಂದ್ರ, ಆದರೆ ಚಿಕ್ಕಬಳ್ಳಾಪುರ ನಗರ ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿ ಅತಿ ಹೆಚ್ಚು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಜಕ್ಕಲಮಡುಗು ನೀರು ಸಮನಾಗಿ ಹಂಚುವ ನಿರ್ಧಾರ ಕೈಬಿಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಈಗಾಗಲೇ ಚಿಕ್ಕಬಳ್ಳಾಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದರು ಜಲಾಶಯದ ಅರ್ಧದಷ್ಟು ನೀರನ್ನು ದೊಡ್ಡಬಳ್ಳಾಪುರ ಹರಿಸುತ್ತೇವೆ ಎನ್ನುವುದು ಯಾವ ನ್ಯಾಯ? ಅದನ್ನು ಬಿಟ್ಟು ಈಗಾಗಲೇ ಬೆಂಗಳೂರು ನಗರಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ನೀರನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಿ. ಮನಸ್ಸಿಗೆ ಬಂದಂತೆ ಮಾತನಾಡಿ ಜನರ ಭಾವನೆ ಕೆರಳಿಸುವ ಕೆಲಸ ಮಾಡಬಾರದು’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ಜಕ್ಕಲಮಡುಗು ನೀರನ್ನು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಶೇ 68:32ರ ಅನುಪಾತದಲ್ಲಿ ಹರಿಸಲು ಒಪ್ಪಂದವಾಗಿದೆ. ಅದರಂತೆ ನೀರು ಹರಿಸಬೇಕು. ಅದನ್ನು ಬಿಟ್ಟು ನೀರಿನಲ್ಲಿ ಸಮಪಾಲು ನೀಡಲು ಬಿಜೆಪಿ ನಾಯಕರು ಮುಂದಾದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ಮುಖಂಡರಾದ ಜಾವೀದ್, ನಾರಾಯಣಸ್ವಾಮಿ, ಸುರೇಶ್, ಷಾಹಿದ್, ಪಾಪಣ್ಣ, ಹಮೀಮ್, ಮಂಜುನಾಥ್, ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.