ADVERTISEMENT

ಹಾಲಿನ ಖರೀದಿ ದರ ಇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 7:26 IST
Last Updated 5 ಜುಲೈ 2021, 7:26 IST
ಕೆ.ವಿ. ನಾಗರಾಜ್
ಕೆ.ವಿ. ನಾಗರಾಜ್   

ಚಿಕ್ಕಬಳ್ಳಾಪುರ: ಕೋಲಾರ– ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್‌) ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರವನ್ನು ಪ್ರತಿ ಲೀಟರಿಗೆ ₹ 1.50 ಕಡಿಮೆ ಮಾಡಿರುವುದು ದುರದೃಷ್ಟಕರ. ಇದು ಖಂಡನೀಯ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷರೂ ಆದ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‍ ಸಂದರ್ಭದಲ್ಲಿ ಎರಡೂ ಜಿಲ್ಲೆ ರೈತರು ಹಣ್ಣು ಮತ್ತು ತರಕಾರಿ ಬೆಳೆದು ಸೂಕ್ತ ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದಾರೆ. ಬೆಳೆಗಳನ್ನು ಚರಂಡಿ, ರಸ್ತೆಗೆ ಸುರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕೋಚಿಮುಲ್ ಆಡಳಿತ ಮಂಡಳಿ ದರ ಇಳಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದಿದ್ದಾರೆ.

ಆಡಳಿತ ಮಂಡಳಿಯವರು ಉತ್ಪಾದಕರಿಗೆ ಅಕ್ಕಿ ನೀಡಲು ನಿರ್ಧರಿಸಿ ಒಕ್ಕೂಟದ ಮೂಲಧನದಿಂದ ದತ್ತಿಗೆ ₹ 3 ಕೋಟಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಹಣದಲ್ಲಿ ಕಳಪೆ ಗುಣಮಟ್ಟದ 5 ಕೆಜಿ ಅಕ್ಕಿ ವಿತರಿಸಿದ್ದಾರೆ. ಇದು ವ್ಯಾಪಕವಾದ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಈ ಹಿಂದೆ ಅಕ್ಕಿ ಕೊಡುವ ನಿರ್ಧಾರ ಮಾಡಿದಾಗ ನಾನೂ ಸೇರಿದಂತೆ ಹಲವು ನಿರ್ದೇಶಕರು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ವ್ಯಕ್ತಿಗೆ 8 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿವೆ. ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ಜನಪ್ರತಿನಿಧಿಗಳು ಅಕ್ಕಿ ಮತ್ತು ಆಹಾರ ಕಿಟ್ ನೀಡುತ್ತಿದ್ದಾರೆ. ಆದ್ದರಿಂದ ಅಕ್ಕಿ ಕೂಡುವುದನ್ನು ಕೈ ಬಿಡಬೇಕು ಎಂದು ಪತ್ರಿಕೆಗಳ ಮೂಲಕ ಮನವಿ ಮಾಡಿದ್ದೆವು. ಆಡಳಿತ ಮಂಡಳಿಯ ಹಲವು ತೀರ್ಮಾನಗಳು ಅವೈಜ್ಞಾನಿಕವಾಗಿವೆ. ಈ ಅವೈಜ್ಞಾನಿಕ ತೀರ್ಮಾನಗಳಿಂದ ಒಕ್ಕೂಟಕ್ಕೆ ನಷ್ಟ ವಾಗುತ್ತಿದೆ. ಆದ್ದರಿಂದ ಆಡಳಿತ ಮಂಡಳಿಯವರು ದುಂದುವೆಚ್ಚ ನಿಲ್ಲಿಸ ಬೇಕು. ಹಾಲಿನ ದರ ಕಡಿತ ನಿಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.