ADVERTISEMENT

ದಟ್ಟ ಮಂಜು: ಭಾರಿ ಚಳಿಗೆ ಜನರ ತತ್ತರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:46 IST
Last Updated 18 ನವೆಂಬರ್ 2025, 7:46 IST
ದಟ್ಟ ಮಂಜಿನ ವಾತಾವರಣದಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ದೃಶ್ಯ
ದಟ್ಟ ಮಂಜಿನ ವಾತಾವರಣದಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ದೃಶ್ಯ   

ನರಸಿಂಹ ಮೂರ್ತಿ ಕೆ. ಎನ್

ಗೌರಿಬಿದನೂರು: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮೈ ಕೊರೆಯುವ ಚಳಿ ಪ್ರಾರಂಭವಾಗಿದೆ. ಜೊತೆಗೆ ಜಿನುಗುತ್ತಿರುವ ದಟ್ಟ ಮಂಜಿನ ವಾತಾವರಣವು ಜನಜೀವನದ ಮೇಲೆ ಪರಿಣಾಮ ಬೀರಿದೆ. 

ತಾಲ್ಲೂಕಿನಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಚಳಿ ಹಾಗೂ ಥಂಡಿ ಗಾಳಿಯಿಂದ ವಯೋವೃದ್ಧರು ಮನೆಯಿಂದ ಹೊರ ಬರಲು ಆಗುತ್ತಿಲ್ಲ. ಮುಂಜಾನೆ ಕೆಲಸ ಮಾಡುವವರು, ಚಹಾ ಅಂಗಡಿಗಳ ಮುಂದೆ ಬಿಸಿ ಚಹಾ ಹೀರುವುದು ಒಂದೆಡೆಯಾದರೆ, ಮತ್ತೆ ಕೆಲವರು ರಸ್ತೆ ಬದಿ, ಅಂಗಡಿಗಳ ಮುಂದೆ ಬೆಂಕಿ ಮುಂದೆ ಮೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. 

ADVERTISEMENT

ನಗರದ ಕಲ್ಲೂಡಿ, ಪ್ರಶಾಂತ್ ನಗರ, ಹಿರೇಬಿದನೂರು, ಮಾದನಹಳ್ಳಿ ಸೇರಿದಂತೆ ಇತರ ಹಳ್ಳಿಗಳಲ್ಲಿ ಚಳಿ ತೀವ್ರವಾಗಿದೆ. 

ಮಂಜು ಮತ್ತು ಚಳಿಯ ತೀವ್ರತೆಯಿಂದ ಮುಂಜಾನೆ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. ನಗರದ ನೇತಾಜಿ ಕ್ರೀಡಾಂಗಣದಲ್ಲಿ ನಿತ್ಯ ನೂರಾರು ಮಂದಿ ಬೆಳಿಗ್ಗೆ, ಸಂಜೆ ವಾಯು ವಿಹಾರ ಮಾಡುತ್ತಿದ್ದರು. ಆದರೆ ಚಳಿಯಿಂದಾಗಿ ವಾಯು ವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ. ಮಂಜು ಮತ್ತು ಶೀತಗಾಳಿಯಿಂದ ಬೆಳಗ್ಗೆ ಮತ್ತು ಮುಸ್ಸಂಜೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಯಸ್ಕರು ಬೆಚ್ಚನೆಯ ಉಣ್ಣೆ ಬಟ್ಟೆಯ ಮೊರೆ ಹೋಗಿದ್ದಾರೆ. ಇಷ್ಟು ದಿನ ಮೂಲೆ ಸೇರಿದ್ದ ಮಕ್ಕಳ ಸ್ವೆಟ್ಟರ್‌ಗಳನ್ನು ಮತ್ತೆ ಹೊರತೆಗೆಯಲಾಗುತ್ತಿದೆ. 

ಇನ್ನು ವಾಹನ ಸವಾರರ ಪರಿಸ್ಥಿತಿ ಹೇಳ ತೀರದಾಗಿದೆ. ದಟ್ಟ ಮಂಜಿನಿಂದಾಗಿ ಎದುರಿಗೆ ಬರುವ ವಾಹನ ದೀಪ ಹಾಕಿಕೊಂಡು ಹತ್ತಿರಕ್ಕೆ ಬಂದರೂ ಕಾಣುತ್ತಿಲ್ಲ. ಹೀಗಾಗಿ, ವಾಹನ ಸವಾರರು ನಿಧಾನವಾಗಿ ಸಂಚರಿಸುವಂತಾಗಿದೆ. ನಗರದಲ್ಲಿ ಹಪ್ಪಳ ಹಾಕುವವರು, ಹಳ್ಳಿಗಳಲ್ಲಿ ಹೂವು ಬಿಡಿಸುವವರು, ಮನೆ ಮನೆಗೆ ಹಾಲು ಹಾಕುವವರು, ಹೀಗೆ ಪ್ರತಿನಿತ್ಯ ಬೆಳಗಿನ ಜಾವ ಕೆಲಸಕ್ಕೆ ತೆರಳುವವರು ಚುಮು ಚುಮು ಚಳಿಗೆ ತರಗುಟ್ಟುತ್ತಿದ್ದಾರೆ.

ೋೇ್ಿ
ೋೇ್ಿ
ಗೌರಿಬಿದನೂರು ನಗರದ ಬಿ. ಎಚ್. ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಮಂಜು ಕವಿದ ವಾತಾವರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.