ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಚಿತ್ರಾವತಿ ಜಲಾಶಯದಿಂದ ಪಟ್ಟಣದ ಸಂತೇಮೈದಾನದ ಶುದ್ಧೀಕರಣದ ಘಟಕದ ಪಕ್ಕದ ವಾರ್ಡ್‌ಗೆ ನೀರನ್ನು ಸಂಸ್ಕರಣೆ ಮಾಡದೆ, ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಪೂರೈಕೆಯಾಗುತ್ತಿರುವ ಕಲುಷಿತ ನೀರು ಗೃಹಬಳಕೆಗೂ ಯೋಗ್ಯವಿಲ್ಲ. ಈ ನೀರಿನ ಬಳಕೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ವ್ಯಕ್ತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪರಗೋಡು ಜಲಾಶಯದಿಂದ ಒಂದೇ ಪೈಪ್‍ಲೈನ್ ಮೂಲಕ ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸರಬರಾಜು ಮಾಡಲಾಗಿದೆ. ಘಟಕದಲ್ಲಿ ನೀರಿಗೆ ಆಲಂ ಹಾಕಿ, ಶುದ್ಧೀಕರಣ ಮಾಡಿದ ಬಳಿಕ, ಓವರ್ ಹೆಡ್ ಟ್ಯಾಂಕುಗಳಿಂದ ಪೈಪ್‍ಲೈನ್‌ನಲ್ಲಿ ಮನೆಗಳಿಗೆ ನೀರು ಹರಿಸಲಾಗಿದೆ.
ಆದರೆ, ಶುದ್ಧಿಕರಣ ಘಟಕದ ಪಕ್ಕದಲ್ಲಿನ ವಾರ್ಡ್‍ನ ಬೀದಿಗೆ 3 ತಿಂಗಳುಗಳಿಂದ ಕೊಳಚೆ ಹಾಗೂ ಮಲಮೂತ್ರ ಮಿಶ್ರಿತ ನೀರು ಹರಿಯುತ್ತಿದೆ. ನೀರನ್ನು ಸಮರ್ಪಕವಾಗಿ ಶುದ್ಧೀಕರಣ ಮಾಡುತ್ತಿಲ್ಲ. ಅನೇಕ ವರ್ಷಗಳ ಹಿಂದೆ ಅಳವಡಿಸಲಾದ ಪಂಪ್‌ಸೆಟ್ ಮೋಟರ್ ಶಿಥಿಲಾವಸ್ಥೆಯಲ್ಲಿದೆ. ಸಮರ್ಪಕವಾಗಿ ನೀರು ಸಂಸ್ಕರಣೆಯಾಗದೆ, ನೇರವಾಗಿ ಮನೆಗಳಿಗೆ ಹರಿಸುತ್ತಿರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.
40 ವರ್ಷಗಳ ಹಿಂದೆ ಅಳವಡಿಸಲಾದ ಪೈಪ್‌ಲೈನ್‌ಗಳು ಶಿಥಿಲಾವಸ್ಥೆಗೆ ತಲುಪಿವೆ. ಪೈಪ್‌ಲೈನ್ ಪಕ್ಕ ಮಲ ಮತ್ತು ಮೂತ್ರದ ಗುಂಡಿಗಳಿವೆ. ಪೈಪುಗಳು ಒಡೆದಿರುವುದರಿಂದ ಕೊಳಚೆ ಮತ್ತು ಮೂತ್ರದ ನೀರು ಪೈಪುಗಳಲ್ಲಿ ಹರಿದುಬರುತ್ತಿದೆ. ಕಸ, ತ್ಯಾಜ್ಯದ ಕಲುಷಿತ ನೀರು ದುರ್ನಾತ ಬೀರುತ್ತಿದೆ. ಮನೆಗಳ ಸಂಪ್‌ಗಳಿಗೆ ಬಿಟ್ಟುಕೊಂಡ ನೀರು ದುರ್ನಾತ ಬೀರುತ್ತಿದ್ದು, ಈ ನೀರನ್ನು ಮೋಟರ್ ಹಾಕಿ ಚರಂಡಿಗೆ ಹರಿಸಲಾಗಿದೆ. ವಾರ್ಡ್ ಜನರು ಕುಡಿಯುವ ಮತ್ತು ಗೃಹಬಳಕೆ ನೀರಿಗೆ ಪರದಾಡುವಂತಾಗಿದೆ.
ಕಲುಷಿತ ನೀರಿನ ಬಳಕೆಯಿಂದ ಸಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳ ಕಾಟವು ಹೆಚ್ಚಾಗಿವೆ. ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ವಾರ್ಡ್‍ನ ನಿವಾಸಿಗಳು ಆರೋಪಿಸಿದರು.
ಫ್ಲೊರೈಡ್ ನೀರು ಕುಡಿಯಲು ಆಗದೆ, ಜನರು ನೀರನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಜನರು ಗೃಹ ಬಳಕೆ ನೀರಿಗಾಗಿ ಖಾಸಗಿ ಟ್ಯಾಂಕರ್ ಅನ್ನು ಅವಲಂಬಿಸಿದ್ದಾರೆ. ಕುಡಿಯುವ ನೀರಿಗೆ ಅಧಿಕಾರಿಗಳು ಕರ ವಸೂಲಿ ಮಾಡುತ್ತಾರೆ. ಆದರೆ, ಜನರಿಗೆ ಕಲುಷಿತ ನೀರು ಪೂರೈಸುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
3 ತಿಂಗಳುಗಳಿಂದ ಮನೆಗಳಿಗೆ ಕಲುಷಿತ ನೀರು ಹರಿಯುತ್ತಿದೆ. ಮೂತ್ರ ಚರಂಡಿ ನೀರು ಸಂಪ್‌ಗೆ ಸರಬರಾಜು ಮಾಡಿದರೆ ಸ್ನಾನ ಮಾಡಲು ಪಾತ್ರೆ ತೊಳೆಯಲು ಬಟ್ಟೆ ಒಗೆಯಲು ಆಗುತ್ತದೆಯೇ?ಅನಿತಾ ವಾರ್ಡ್‍ನ ನಿವಾಸಿ
ಪುರಸಭಾ ಮುಖ್ಯಾಧಿಕಾರಿಗಳು ಅಧಿಕಾರಿಗಳು ಸದಸ್ಯರು ವಾರ್ಡ್‍ಗಳಿಗೆ ಭೇಟಿ ನೀಡಲ್ಲ. ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಶುದ್ಧ ಕುಡಿಯುವ ನೀರು ಸರಬರಾಜು ಮಾಡಿಸಬೇಕುಸ್ಥಳೀಯ ನಿವಾಸಿಗಳು
ಪಟ್ಟಣದ ಕಲುಷಿತ ನೀರು ಹರಿಯುವ ವಾರ್ಡ್‍ಗೆ ಭೇಟಿ ನೀಡಿ ನೀರು ಸರಬರಾಜಿನ ಪೈಪ್‍ಲೈನ್‍ಗಳ ಬಗ್ಗೆ ಪರಿಶೀಲಿಸಲಾಗುವುದು. ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದುಎಂ. ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.