ADVERTISEMENT

ಗಡಿ ಗ್ರಾಮಗಳಲ್ಲಿ‌ ‘ಮದ್ಯ’ದ ಆತಂಕ

ಗೌರಿಬಿದನೂರು: ಆಂಧ್ರ ಪ್ರದೇಶದ ಗಡಿ ಭಾಗಗಳಲ್ಲಿ ಹೆಚ್ಚಿದ ಕೊರೊನಾ ಪ್ರಕರಣ

ಎ.ಎಸ್.ಜಗನ್ನಾಥ್
Published 24 ಮೇ 2020, 19:45 IST
Last Updated 24 ಮೇ 2020, 19:45 IST
ನಗರಗೆರೆ ಹೋಬಳಿಯ ಗಡಿಭಾಗದಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರತವಾಗಿರುವ ಪಂಚಾಯಿತಿ ಅಧಿಕಾರಿಗಳು ‌ಮತ್ತು ಕಾರ್ಯಪಡೆ
ನಗರಗೆರೆ ಹೋಬಳಿಯ ಗಡಿಭಾಗದಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರತವಾಗಿರುವ ಪಂಚಾಯಿತಿ ಅಧಿಕಾರಿಗಳು ‌ಮತ್ತು ಕಾರ್ಯಪಡೆ   

ಗೌರಿಬಿದನೂರು: ತಾಲ್ಲೂಕಿನಲ್ಲಿ‌ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಭಯದ ವಾತಾವರಣ ಉಂಟಾಗುತ್ತಿದೆ. ಮತ್ತೊಂದೆಡೆ ನೆರೆಯ ಆಂಧ್ರಪ್ರದೇಶದ ಗಡಿ‌ಭಾಗದ ಜನರು ಅಡ್ಡದಾರಿಗಳನ್ನು ಹಿಡಿದು ಬರುತ್ತಿರುವುದು ಗಡಿಗ್ರಾಮಗಳಲ್ಲಿನ ಜನರಿಗೆ ತಲೆನೋವಾಗಿದೆ.

ತಾಲ್ಲೂಕಿನಲ್ಲಿನ ಮದ್ಯದಂಗಡಿಗಳು 20 ದಿನಗಳಿಂದ ತೆರೆದಿದ್ದು, ನೆರೆಯ ಆಂಧ್ರದ ಗಡಿ ಗ್ರಾಮಗಳ ಜನರು ಕಳ್ಳ ದಾರಿಯಲ್ಲಿ ಬಂದು ಮದ್ಯ ಕೊಂಡು ಹೋಗುತ್ತಿದ್ದಾರೆ. ಗ್ರಾಮಗಳ‌‌ ಮುಖ್ಯರಸ್ತೆಗಳಲ್ಲಿ ತಾಲ್ಲೂಕು ಆಡಳಿತವು ಚೆಕ್‌ಪೋಸ್ಟ್‌ಗಳನ್ನು ಹಾಕಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ ಹಿಂದೂಪುರ ತಾಲ್ಲೂಕಿನ ಬಹುತೇಕರು ಮದ್ಯ ಮತ್ತು ಮಾಂಸ ಸೇವನೆಗೆ ರಾಜ್ಯದ ಗಡಿ‌ಗ್ರಾಮಗಳನ್ನು ಅವಲಂಬಿಸಿದ್ದಾರೆ.

ಕೈಗಾರಿಕಾ ವಲಯ, ಜಮೀನುಗಳು ಸೇರಿದಂತೆ ‌ಇನ್ನಿತರ ಅಡ್ಡ ದಾರಿಗಳನ್ನು ಬಳಸಿಕೊಂಡು ರಾಜಾರೋಷವಾಗಿ ಗಡಿ‌ಗ್ರಾಮಗಳಿಗೆ ಬಂದು ಮದ್ಯ ಮತ್ತು‌ ಮಾಂಸ ಆಹಾರ ಕೊಂಡು ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ, ಮರದಡಿ, ಲೇಔಟ್‌ ಸೇರಿದಂತೆ ಇನ್ನಿತರ ‌ನಿರ್ಜನ ಪ್ರದೇಶದಲ್ಲಿ ಗುಂಪುಗುಂಪಾಗಿ‌ ಕೂತು ಮೋಜು ಮಾಡಿ ತೆರಳುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ADVERTISEMENT

‘ಗ್ರಾಮದಲ್ಲಿ ನಿತ್ಯ ಹತ್ತಾರು ಆಂಧ್ರದ ಯುವಕರು ಸಂಚರಿಸುವುದರಿಂದ ಮಕ್ಕಳು ಮತ್ತು ಮಹಿಳೆಯರು ‌ನಿರ್ಭೀತಿಯಿಂದ ಹೊರಗಡೆ ಓಡಾಡಲು ಹೆದರುವಂತಾಗಿದೆ. ಈ‌ ಭಯದಿಂದ ಜಮೀನಿನಲ್ಲಿ ಕೆಲಸ ಮಾಡಲು ಕಾರ್ಮಿಕರೇ ಸಿಗದಂತಾಗಿದೆ. ಗಡಿ‌ಭಾಗದ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಮರೆಯಾಗಿದೆ’ ಎನ್ನುತ್ತಾರೆ ಗೌಡಸಂದ್ರ ಗ್ರಾಮದ ನಿವಾಸಿ ಕೃಷ್ಣಮೂರ್ತಿ.

ಅಬಕಾರಿ ನಿರೀಕ್ಷಕರಾದ ಮಂಜುನಾಥ್, ‘ಗಡಿ‌ಭಾಗದಲ್ಲಿನ ಮದ್ಯದ ಅಂಗಡಿಗಳನ್ನು ಸರ್ಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ. ಗಡಿ‌ಗ್ರಾಮಗಳಲ್ಲಿ ಮದ್ಯ ಸಿಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾವುದಾದರೂ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾದರೇ ಕೂಡಲೇ ಕ್ರಮ ಕೈಗೊಂಡು ಆರೋಪಿಗಳ‌ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಹೇಳಿದರು.

ಗಡಿ‌ಭಾಗದಲ್ಲಿವೆ ಈ ಗ್ರಾಮಗಳು

ಗೌರಿಬಿದನೂರು ತಾಲ್ಲೂಕು ನೆರೆಯ ಆಂಧ್ರಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಗಡಿ‌ಗ್ರಾಮಗಳಾದ ಕುಡುಮಲಕುಂಟೆ, ಗೌಡಸಂದ್ರ, ಉಚ್ಚೋದನಹಳ್ಳಿ, ಮೇಳ್ಯ, ಹುಣಸೇನಹಳ್ಳಿ, ಜಗರೆಡ್ಡಿಹಳ್ಳಿ, ಒಂಟಿಮನೆಹಳ್ಳಿ, ಜೀಲಾಕುಂಟೆ, ಮರಿಪಡುಗು, ಸಾದಾರ್ಲಹಳ್ಳಿ, ನಗರಗೆರೆ, ಮಟ್ಟಾವಲಹಳ್ಳಿ, ಬಂದಾರ್ಲಹಳ್ಳಿ ಮತ್ತು ಮೈದಗೊಳ ಗ್ರಾಮಗಳಲ್ಲಿನ ಜನರು ಆತಂಕದಲ್ಲೇ ಬದುಕುತ್ತಿದ್ದಾರೆ.

ನೆಮ್ಮದಿಯ ಬದುಕಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.