ADVERTISEMENT

ಚಿಕ್ಕಬಳ್ಳಾಪುರ: ಲಕ್ಷಗಟ್ಟಲೇ ವೆಚ್ಚ, ₹6,000 ಪರಿಹಾರ!

ಲಾಕ್‌ಡೌನ್‌ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಘೋಷಿಸಿದ ನೆರವಿಗೆ ದ್ರಾಕ್ಷಿ ಬೆಳೆಗಾರರ ತೀವ್ರ ಅಸಮಾಧಾನ

ಈರಪ್ಪ ಹಳಕಟ್ಟಿ
Published 18 ಮೇ 2020, 19:30 IST
Last Updated 18 ಮೇ 2020, 19:30 IST
ಚಿಕ್ಕಬಳ್ಳಾಪುರಕ್ಕೆ ಏಪ್ರಿಲ್‌ನಲ್ಲಿ ಭೇಟಿ ನೀಡಿ ದ್ರಾಕ್ಷಿ ಬೆಳೆಗಾರರ ಅಹವಾಲು ಆಲಿಸಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ತೋಟಗಾರಿಕೆ ಸಚಿವ ನಾರಾಯಣಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರಕ್ಕೆ ಏಪ್ರಿಲ್‌ನಲ್ಲಿ ಭೇಟಿ ನೀಡಿ ದ್ರಾಕ್ಷಿ ಬೆಳೆಗಾರರ ಅಹವಾಲು ಆಲಿಸಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ತೋಟಗಾರಿಕೆ ಸಚಿವ ನಾರಾಯಣಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ’ಏನ್‌ ಅನ್ಯಾಯ ಸ್ವಾಮಿ, ಲಕ್ಷಗಟ್ಟಲೇ ವೆಚ್ಚ ಮಾಡಿ ದ್ರಾಕ್ಷಿ ಬೆಳೆದು ನಷ್ಟವಾದರೆ, ಸರ್ಕಾರ ಒಂದು ಎಕರೆಗೆ ಬರೀ ₹6,000 ಪರಿಹಾರ ಘೋಷಿಸಿದೆ. ಇದು ಎಕರೆ ದ್ರಾಕ್ಷಿ ತೋಟಕ್ಕೆ ಒಂದು ಬಾರಿ ಮದ್ದಿಗೆ ಸಾಲಲ್ಲ. ಮೂಗಿಗೆ ತುಪ್ಪ ಸವರೋದು ಅಂದ್ರೆ ಇದೇ ತಾನೇ?‘

ಸರ್ಕಾರ ಘೋಷಿಸಿದ ಪರಿಹಾರದ ಬಗ್ಗೆ ವಿಚಾರಿಸುತ್ತಿದ್ದಂತೆ ದಿಬ್ಬೂರಿನ ದ್ರಾಕ್ಷಿ ಬೆಳೆಗಾರ ಡಿ.ಎನ್.ಮಹೇಶ್‌ ಅವರು ಒಂದೇ ಉಸಿರಿನಲ್ಲಿ ತಮ್ಮ ಮನದಾಳದ ಆಕ್ರೋಶ ಹೀಗೆ ಹೊರಹಾಕಿದರು. ಜತೆಗೆ ’ಇದು ನನ್ನದೊಬ್ಬನದೇ ಅಲ್ಲ ಎಲ್ಲ ದ್ರಾಕ್ಷಿ ಬೆಳೆಗಾರರ ನೋವು ಅಂತಲೂ ಬರೆದುಕೊಳ್ಳಿ‘ ಎಂದು ತಿಳಿಸಿದರು.

’ಸರ್ಕಾರದ ಪರಿಹಾರ ಒಂದು ದಿನ ಕೂಲಿ ಆಳಿನ ಖರ್ಚಿಗೆ, ಒಂದು ಕೋಟ್‌ ಔಷಧಿಗೆ ಸಾಕಾಗಲ್ಲ. ಅದನ್ನು ಪಡೆಯಲೂ ಕಚೇರಿ ಅಲೆಯುವುದು ಬೇರೆ ಕೆಲಸ. ಬೇಸತ್ತ ಆ ವಿಚಾರವನ್ನೇ ಮರೆತು ಬಿಟ್ಟೆ. ಕನಿಷ್ಠ ಒಂದು ಎಕರೆಗೆ ₹50 ಸಾವಿರ ಘೋಷಿಸಿದರೂ ಈ ಬಾರಿ ಹಾಕಿದ ಬಂಡವಾಳ ವಾಪಾಸಾಗುವುದಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಹಣ್ಣು ಬೆಳೆಗಾರರ ನೆರವಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಿಸಿದ ಪರಿಹಾರ ಅವೈಜ್ಞಾನಿಕವಾಗಿದ್ದು, ’ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ‘ಯಂತಾಗಿದೆ ಎಂದು ಇದೀಗ ದ್ರಾಕ್ಷಿ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಯಡಿಯೂರಪ್ಪ ಅವರು ಒಂದು ಮತ್ತು ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆದು ನಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿದ್ದರು. ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ (ಎರಡೂವರೆ ಎಕರೆ) ₹25 ಸಾವಿರ ಮತ್ತು ಹಣ್ಣು, ತರಕಾರಿಗೆ ಹೆಕ್ಟೇರ್‌ಗೆ ₹15 ಸಾವಿರ ಘೋಷಣೆ ಮಾಡಿದ್ದರು.

ಒಂದು ಎಕರೆ ದ್ರಾಕ್ಷಿ ಹೊಸ ತೋಟ ನಿರ್ಮಿಸಿ, ಬೆಳೆ ಇಡಲು ಕನಿಷ್ಠ ಐದಾರು ಲಕ್ಷ ವೆಚ್ಚವಾಗುತ್ತದೆ. ಬರೀ ಎಕರೆ ದ್ರಾಕ್ಷಿ ಬೆಳೆಯಲು ₹1.50 ಲಕ್ಷದಿಂದ ₹2 ಲಕ್ಷದವರೆಗೆ ಖರ್ಚಾಗುತ್ತದೆ ಎಂದು ಬೆಳೆಗಾರರು ಲೆಕ್ಕ ಕೊಡುತ್ತಾರೆ.

ದ್ರಾಕ್ಷಿ ಬೆಳೆ ಬೆಳೆಯಲು ಆರಂಭದಲ್ಲಿ ಫ್ರೂನಿಂಗ್ ಮಾಡಿಸುವುದರಿಂದ ಹಿಡಿದು ಗೊಬ್ಬರ–ಹಿಂಡಿ ನೀಡುವುದು, ಫೆಸ್ಟಿಂಗ್ ಮಾಡಿಸುವುದು, ಚಿಗುರು ತೆಗೆಸುವುದು, ಗೊನೆ ಇಳಿಸುವುದು, ಗೊನೆ ಕಟ್ಟಿಸುವುದು, ಬಳ್ಳಿ ಕತ್ತರಿಸುವುದು, ರಾಸಾಯನಿಕ ಹಾಕುವುದು, ಮದ್ದು ಹೊಡೆಯುವುದು.. ಹೀಗೆ ವಿವಿಧ ಹಂತಗಳಲ್ಲಿ ಕೊಯ್ಲು ಮಾಡುವ ಹೊತ್ತಿಗೆ ಒಂದು ಎಕರೆಗೆ ಸುಮಾರು ₹2 ಲಕ್ಷ ವೆಚ್ಚವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಕಳೆದ ಅನೇಕ ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದು ಕೊಳವೆಬಾವಿಗಳು ಬತ್ತಿದ ಕಾರಣಕ್ಕೆ ಸಾಕಷ್ಟು ರೈತರು ಟ್ಯಾಂಕರ್‌ ನೀರು ಖರೀದಿಸಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇವರು ಖರ್ಚು ಸಾಮಾನ್ಯ ಬೆಳೆಗಾರರಿಗಿಂತಲೂ ತುಸು ಹೆಚ್ಚೇ ಇರುತ್ತದೆ.

ಈ ಬಾರಿ ಕೊರೊನಾ ಭೀತಿ, ಲಾಕ್‌ಡೌನ್‌ ಕಾರಣಕ್ಕೆ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಹೊರಗಿನ ಮಾರುಕಟ್ಟೆಗಳಿಗೆ ದ್ರಾಕ್ಷಿ ಸಾಗಿಸಲಾಗದೆ ರೈತರು ಕಂಗಾಲಾಗಿ, ವಿಲಗುಟ್ಟುವ ವಾತಾವಾರಣ ನಿರ್ಮಾಣವಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಕೆಲ ಕಠಿಣ ಕ್ರಮಗಳನ್ನು ಸಡಿಲಿಸಿದ ಪರಿಣಾಮ ತೋಟದತ್ತ ಖರೀದಿದಾರರು ಸುಳಿಯುವಂತಾಯಿತು.

ಜಿಲ್ಲೆಯಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ದ್ವೈವಾರ್ಷಿಕ ಬೆಳೆಯಾದ ಬೆಂಗಳೂರು ಬ್ಲೂ (ಕಪ್ಪು ದ್ರಾಕ್ಷಿ) ಮತ್ತು ದಿಲ್‌ಕುಷ್‌, ಬೀಜ ರಹಿತ ಶರತ್, ಕೃಷ್ಣಾ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಋತುವಿನಲ್ಲಿ 2,500 ಎಕರೆಯಲ್ಲಿ ಅಂದಾಜು 40 ಸಾವಿರ ಟನ್ ದ್ರಾಕ್ಷಿ ಫಸಲು ಮಾರಾಟವಾಗಬೇಕಿತ್ತು.

ಈಗಾಗಲೇ ಈ ಪೈಕಿ ಶೇ 80 ರಷ್ಟು ದ್ರಾಕ್ಷಿ ಮಾರಾಟವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಬೆಳೆಗಾರರು ಇನ್ನೂ ಶೇ 50 ರಷ್ಟು ಫಸಲು ಮಾರಾಟ ಮಾಡಬೇಕಿದೆ ಎಂದು ತಿಳಿಸುತ್ತಾರೆ.

ಈ ನಡುವೆಯೇ ಸಾಕಷ್ಟು ರೈತರು ಬೇಸತ್ತು ದ್ರಾಕ್ಷಿ ಕೊಯ್ದು ತಿಪ್ಪೆಗೆ ಸುರಿದಿದ್ದಾರೆ. ಹಂದಿ ಸಾಕಾಣಿಕೆದಾರರಿಗೆ ಉಚಿತವಾಗಿ ಟನ್‌ಗಟ್ಟಲೇ ಕೊಟ್ಟು ಕಳುಹಿಸಿದ್ದಾರೆ. ಕೆಲವೇ ರೈತರು ಬೆಂಗಳೂರಿಗೆ ಹೋಗಿ ನೇರ ಮಾರುಕಟ್ಟೆ ಕಂಡುಕೊಳ್ಳಲು ಪರದಾಡಿದ್ದಾರೆ. ಹದಗೆಟ್ಟ ಮಾರುಕಟ್ಟೆ ವ್ಯವಸ್ಥೆಯಿಂದ ಬೆಲೆ ಪಾತಾಳಕ್ಕೆ ಕುಸಿದರೂ ಅನಿವಾರ್ಯವಾಗಿ ರೈತರು ಕೈಗೆ ಬಂದ ಬೆಲೆಗೆ ಮಾರಾಟ ಮಾಡುವಂತಾಗಿದೆ.

ಒಂದು ಕೆ.ಜಿ.ಗೆ ಗರಿಷ್ಠ ₹70 ರಿಂದ ₹80ರ ವರೆಗೆ ಮಾರಾಟವಾಗುತ್ತಿದ್ದ ದಿಲ್‌ಕುಷ್‌ ದ್ರಾಕ್ಷಿ ಈ ಬಾರಿ ಕನಿಷ್ಠ ₹7 ರಿಂದ ₹10 ರವರೆಗೆ ಮಾರಾಟವಾಗಿದೆ. ಬೀಜ ರಹಿತ ಕೃಷ್ಣಾ, ಶರತ್ ತಳಿ ದ್ರಾಕ್ಷಿ ಸಾಮಾನ್ಯವಾಗಿಒಂದು ಕೆ.ಜಿ.ಗೆ ₹100ಕ್ಕೆ ಮಾರಾಟವಾಗುತ್ತಿತ್ತು. ಈ ಬಾರಿ ಅವು ₹50 ಒಳಗೆ ಮಾರಾಟವಾಗಿವೆ.

ಇನ್ನು, ₹40 ರಿಂದ ₹50 ಬೆಲೆ ಮಾರಾಟವಾಗುತ್ತಿದ್ದ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಕೊಯ್ಲು ಋತುವಿನ ಆರಂಭದಲ್ಲಿ ಕೇಳುವವರೇ ಇರಲಿಲ್ಲ. ನೂರಾರು ರೈತರು ಹಣ್ಣನ್ನು ತಿಪ್ಪೆಗೆ ಸುರಿದರೆ, ಕೆಲವರು ತೋಟ ಖಾಲಿಯಾದರೆ ಸಾಕೆಂದು ಒಂದು ಕೆ.ಜಿ. ಹಣ್ಣಿಗೆ ನಾಲ್ಕೈದು ರೂಪಾಯಿಗೆ ಬಿಕರಿ ಮಾಡಿದರು. ಸದ್ಯ ಅದು ₹25 ರಿಂದ ₹30 ಕ್ಕೆ ಮಾರಾಟವಾಗುತ್ತಿದೆ.

’ವಾಣಿಜ್ಯ ಬೆಳೆಗಳನ್ನು ಬೆಳೆಯಲು ಬಂಡವಾಳ ಹೆಚ್ಚು ಹೂಡಿಕೆ ಮಾಡಬೇಕು. ಹೆಚ್ಚು ದಿನ ಇಟ್ಟುಕೊಂಡು ಮಾರಲಾಗದ ಸಂಕಟ ಇದೆಲ್ಲದರ ಅರಿವಿದ್ದರೂ ಸರ್ಕಾರ ಒಂದು ದಿನದ ಮದ್ದಿನ ಖರ್ಚು ಕೊಟ್ಟು ನಾನು ರೈತರನ್ನು ಕಾಪಾಡುತ್ತೇನೆ ಎಂದು ಹೇಳಿಕೊಂಡರೆ ಒಪ್ಪಬಹುದೆ‘ ಎಂದು ಅರಸನಹಳ್ಳಿ ರೈತ ವೆಂಕಟರಾಮ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.