ADVERTISEMENT

ಕೋವಿಡ್ ಪೀಡಿತರಲ್ಲಿ ಪುರುಷರೇ ಅಧಿಕ

ಜಿಲ್ಲೆಯಲ್ಲಿ 30 ಮಂದಿ ತೃತೀಯ ಲಿಂಗಿಗಳಿಗೆ ಸೋಂಕು

ಡಿ.ಎಂ.ಕುರ್ಕೆ ಪ್ರಶಾಂತ
Published 23 ಮೇ 2021, 7:57 IST
Last Updated 23 ಮೇ 2021, 7:57 IST
ಡಾ.ರಜನಿ
ಡಾ.ರಜನಿ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಪುರುಷರೇ ಅಧಿಕವಾಗಿದ್ದಾರೆ. ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಕೋವಿಡ್ ಅಲೆಯಲ್ಲಿ ಒಟ್ಟು 32,32,579 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 19,338 ಪುರುಷರಿಗೆ ಸೋಂಕು ತಗುಲಿದ್ದರೆ, 13,211 ಮಹಿಳೆಯರು ಸೋಂಕಿತರಾಗಿದ್ದಾರೆ. 30 ಮಂದಿ ತೃತೀಯ ಲಿಂಗಿಗಳಿಗೂ ಸೋಂಕು ತಗುಲಿದೆ.ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಪುರುಷರು ಕೋವಿಡ್‌ಗೆ ತುತ್ತಾಗಿದ್ದಾರೆ.

ಮೊದಲ ಅಲೆ ಸಂದರ್ಭದಲ್ಲಿಯೂ ಪುರುಷರೇ ಅಧಿಕವಾಗಿ ಸೋಂಕಿಗೆ ತುತ್ತಾಗಿದ್ದರು. ಎರಡನೇ ಅಲೆಯಲ್ಲಿಯೂ ಇವರಲ್ಲಿಯೇ ಹೆಚ್ಚಿನದಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮೃತ ರಾಗುತ್ತಿರುವವರಲ್ಲಿಯೂ ಪುರುಷರೇ ಹೆಚ್ಚಿದ್ದಾರೆ. ಹೆಚ್ಚಿದೆ. ಜಿಲ್ಲೆಯಲ್ಲಿ ಬುಧವಾರ ಮೃತಪಟ್ಟ 7 ಮಂದಿಯೂ ಪುರುಷರೇ ಆಗಿದ್ದಾರೆ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿಯೇ ಉಳಿಯುವರು. ಮಕ್ಕಳ ಆರೈಕೆ, ಕುಟುಂಬ ನಿರ್ವಹಣೆಯ ಪ್ರಮುಖ ಜವಾಬ್ದಾರಿ ಇವರ ಮೇಲಿದೆ. ತರಕಾರಿ, ಹಣ್ಣು, ದಿನಸಿ ಪದಾರ್ಥಗಳ ಖರೀದಿ ಇತ್ಯಾದಿ ಕಾರಣಕ್ಕೆ ಮಾರುಕಟ್ಟೆಗಳಲ್ಲಿ ಪುರುಷರ ಓಡಾಟವೇ ಹೆಚ್ಚಿದೆ. ಬೆಳಿಗ್ಗೆ 6ರಿಂದ 10 ಗಂಟೆಯ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವವರಲ್ಲಿ ಪುರುಷರೇ ಅಧಿಕವಾಗಿದ್ದಾರೆ. ಈ ಮುಂಚೆ ತರಕಾರಿ ಸೇರಿದಂತೆ ದಿನಸಿ ಪದಾರ್ಥಗಳ ಖರೀದಿಯಲ್ಲಿ ಮಹಿಳೆ ಯರೂ ಹೆಚ್ಚು ಕಂಡು ಬರುತ್ತಿದ್ದರು.

ನಿಯಮಗಳ ಉಲ್ಲಂಘನೆಯಲ್ಲೂ ಮುಂದೆ: ಮತ್ತೊಂದೆಡೆ ಕೋವಿಡ್ ನಿಯಮಗಳ ಉಲ್ಲಂಘನೆಯಲ್ಲಿಯೂ ಪುರುಷರೇ ಅಧಿಕವಾಗಿದ್ದಾರೆ. ಪ್ರತಿ ದಿನವೂ ಜಿಲ್ಲೆಯ ಒಂದಲ್ಲಾ ಒಂದು ಠಾಣೆಗಳಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗುತ್ತಿವೆ. ಈ ‍ಪ್ರಕರಣಗಳಲ್ಲಿ ಹೆಚ್ಚು ಆರೋಪಿಗಳು ಪುರುಷರೇ ಆಗಿದ್ದಾರೆ. ಗ್ರಾಮಾಂತರ ಭಾಗಗಳ ಅಂಗಡಿಗಳ ಬಳಿ ಸೇರಿ ಮದ್ಯಪಾನ ಮಾಡುವುದು, ಜೂಜಾಟ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪುರುಷರು ಮಾಡುತ್ತಿದ್ದಾರೆ.
ಅಂತರ ಕಾಪಾಡಿಕೊಳ್ಳದೆ ಒತ್ತೊತ್ತಾಗಿ ನಿಂತಿರುವುದಕ್ಕೆ ಸಂಬಂಧಿಸಿ ದಂತೆ ದಾಖಲಾಗುತ್ತಿರುವ
ಪ್ರಕರಣಗಳಲ್ಲಿ ಪುರುಷರೇ ಮುಂದಿದ್ದಾರೆ!. ಪುರುಷರು ತಮ್ಮ ಮನೆಯಲ್ಲಿರುವ ಮಹಿಳೆಯರಿಗೂ ಸೋಂಕು ಹರಡಲು ಮೂಲ ಕಾರಣರಾಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಜಿಲ್ಲಾಧಿಕಾರಿ ಆರ್.ಲತಾ ಕತ್ತರಿಗುಪ್ಪೆ ಸೇರಿ ವಿವಿಧ ಗ್ರಾಮಗಳಿಗೆ
ಭೇಟಿ ನೀಡಿದ್ದರು. ಆಗ ಆಶಾ ಕಾರ್ಯ ಕರ್ತೆಯರು, ‘ಕೊರೊನಾ ಸೋಂಕಿತ ಪುರುಷರು ಮನೆಗಳಿಂದ ಹೊರಗೆ ತಿರುಗಾಡುವರು. ಕೇಳಿದರೆ ಹಲ್ಲೆ ನಡೆಸಲು ಮುಂದಾಗುವರು’ ಎಂದು ಅವಲತ್ತುಕೊಂಡಿದ್ದರು.

ADVERTISEMENT

30 ತೃತೀಯ ಲಿಂಗಿಗಳಲ್ಲಿ ಸೋಂಕು: ಜಿಲ್ಲೆಯಲ್ಲಿ ಇಲ್ಲಿಯವರೆ ಒಟ್ಟು 30 ಮಂದಿ ತೃತೀಯ ಲಿಂಗಿಗಳಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಗೌರಿಬಿದನೂರಿನಲ್ಲಿ ಗರಿಷ್ಠ 9 ಮಂದಿಗೆ ಸೋಂಕು ತಗುಲಿದ್ದರೆ ಗುಡಿಬಂಡೆ ತಾಲ್ಲೂಕಿನಲ್ಲಿ ಒಬ್ಬ ತೃತೀಯಲಿಂಗಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.