ADVERTISEMENT

ಚಿಕ್ಕಬಳ್ಳಾಪುರ | ನಡುಕ ಹುಟ್ಟಿಸಿದ ಕೋವಿಡ್–19

ಉಪವಿಭಾಗಾಧಿಕಾರಿ ಕಚೇರಿಯ ಮೂರು ಸಿಬ್ಬಂದಿಯಲ್ಲಿ ಸೋಂಕು ಪತ್ತೆ, ತಾಲ್ಲೂಕು ಕಚೇರಿ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 14:16 IST
Last Updated 30 ಜೂನ್ 2020, 14:16 IST
ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುವ ನೌಕರರು ಮಂಗಳವಾರ ತಪಾಸಣೆ ಮಾಡಿಸಿಕೊಂಡರು.
ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುವ ನೌಕರರು ಮಂಗಳವಾರ ತಪಾಸಣೆ ಮಾಡಿಸಿಕೊಂಡರು.   

ಚಿಕ್ಕಬಳ್ಳಾಪುರ: ಪೊಲೀಸರು, ಆರೋಗ್ಯ ಸಿಬ್ಬಂದಿ ತರುವಾಯ ಇದೀಗ ಕಂದಾಯ ಇಲಾಖೆಯ ಮೂರು ನೌಕರರಲ್ಲಿ ಕೋವಿಡ್‌ ಇರುವುದು ಪತ್ತೆಯಾಗಿದ್ದು, ಸರ್ಕಾರಿ ನೌಕರರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 13 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆ ಸಿಬ್ಬಂದಿ ಮಂಗಳವಾರ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಉಪವಿಭಾಗಾಧಿಕಾರಿ ಕಚೇರಿಯ ಒಬ್ಬರು ಮತ್ತು ಭೂದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕರ (ಎಡಿಎಲ್‌ಆರ್) ಕಚೇರಿಯ ಇಬ್ಬರು ಸೇರಿದಂತೆ ಮೂರು ನೌಕರರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ತಾಲ್ಲೂಕು ಕಚೇರಿಯನ್ನು ವೈರಸ್‌ ನಾಶಕ ದ್ರಾವಣದಿಂದ ಶುಚಿಗೊಳಿಸುವ ಜತೆಗೆ ಸೀಲ್‌ಡೌನ್‌ ಮಾಡಲಾಯಿತು. ಈ ವಿಚಾರ ತಿಳಿಯದೆ ತಾಲ್ಲೂಕು ಕಚೇರಿಗೆ ಬಂದಿದ್ದ ಸಾರ್ವಜನಿಕರೆಲ್ಲ ಬರಿಗೈಯಲ್ಲಿ ವಾಪಾಸಾದರು.

ADVERTISEMENT

ಮಂಗಳವಾರ ಚಿಕ್ಕಬಳ್ಳಾಪುರ ನಗರವೊಂದರಲ್ಲೇ ಆರು ತಿಂಗಳ ಶಿಶು, ಗರ್ಭಿಣಿ ಸೇರಿದಂತೆ 10 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಗಂಗಮ್ಮಗುಡಿ ರಸ್ತೆ, ಕಾರ್ಖಾನೆಪೇಟೆ ರಸ್ತೆ, ಬಿ.ಬಿ.ರಸ್ತೆಯ ಕೆಲ ನಿವಾಸಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು, ನಗರದ ಹೃದಯಭಾಗದ ನಿವಾಸಿಗಳನ್ನು ತಲ್ಲಣಗೊಳಿಸಿದೆ.

ಇನ್ನುಳಿದಂತೆ ಗೌರಿಬಿದನೂರು ನಿವಾಸಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರಿಗೆ, ಶಿಡ್ಲಘಟ್ಟ ಜಂಗಮಕೋಟೆಯ 28 ವರ್ಷದ ಯುವಕನೊಬ್ಬನಿಗೆ ಮತ್ತು ಚಿಂತಾಮಣಿಯ 29 ವಯಸ್ಸಿನ ಯುವಕನಿಗೆ ಕೋವಿಡ್‌ ಇರುವುದು ಬೆಳಕಿಗೆ ಬಂದಿದೆ.

ಕೋವಿಡ್ ಪೀಡಿತರ ವಾಸಸ್ಥಳ‌ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ವೈರಸ್‌ ನಾಶಕ ದ್ರಾವಣದಿಂದ ಶುಚಿಗೊಳಿಸುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿ‌ ಕಲೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 214 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 38, ಬಾಗೇಪಲ್ಲಿ 53, ಚಿಂತಾಮಣಿ 16, ಗೌರಿಬಿದನೂರು 96, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11 ಜನರಿಗೆ ಕೋವಿಡ್ ಸೋಂಕಿದೆ.

ಸೋಂಕಿತರ ಪೈಕಿ ಇಬ್ಬರು ಕೋವಿಡ್‌ನಿಂದ, ಇಬ್ಬರು ವಿವಿಧ ಕಾಯಿಲೆಗಳಿಂದ ಮೃತಪಟ್ಟಿದ್ಧಾರೆ. ಚಿಕಿತ್ಸೆಯಿಂದ 165 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್‌ ವಾರ್ಡ್‌ನಲ್ಲಿ 46 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.