
ಬಾಗೇಪಲ್ಲಿ: ವೆನೆಜುವೆಲಾ ಮೇಲಿನ ಅಮೆರಿಕದ ಆಕ್ರಮಣವು ಆ ದೇಶದ ಮೇಲಿನ ಸಾರ್ವಭೌಮತೆ ಮೇಲಿನ ದಾಳಿಯಾಗಿದೆ. ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫೋರ್ಸ್ ಅವರನ್ನು ಅಮೆರಿಕ ಅಪಹರಣ ಮಾಡಿರುವುದು ಸರಿಯಲ್ಲ ಎಂದು ಸಿಪಿಎಂ ಪ್ರತಿಪಾದಿಸಿದರು.
ಪಟ್ಟಣದ ಸುಂದರಯ್ಯನ ಭವನದಿಂದ ಹೊರಟ ಪ್ರತಿಭಟನಕಾರರ ಬೈಕ್ ರ‍್ಯಾಲಿಯ ವೇಳೆ ಸಾಮ್ರಾಜ್ಯಶಾಹಿ ಅಮೆರಿಕ ಧೋರಣೆ ವಿರುದ್ಧ ಧಿಕ್ಕಾರ ಕೂಗಲಾಯಿತು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ವೆನೆಜುವೆಲಾ ವಿರುದ್ಧ ಅಮೆರಿಕದ ದಾಳಿ ಮತ್ತು ಅಧ್ಯಕ್ಷ ನಿಕೊಲಸ್ ಮಡುರೊ ಹಾಗೂ ಅವರ ಹೆಂಡತಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕ ಬಂಧಿಸಿರುವುದು ವಿಶ್ವಸಂಸ್ಥೆಯ ಚಾರ್ಟರ್‌ನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ವೆನೆಜುವೆಲಾ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಆಕ್ರಮಣದ ಹಿಂದಿನ ನಿಜವಾದ ಆಶಯ ಬಯಲಾಗಿದೆ. ಅಲ್ಲದೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯಾ ಅವರು ತಮ್ಮ ಮುಂದಿನ ಗುರಿ ಕ್ಯೂಬಾ ಮತ್ತು ಮೆಕ್ಸಿಕೊ ಎಂದು ಹೇಳಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ವೆನೆಜುವೆಲಾದ ಹೋರಾಟನಿರತ ಜನರಿಗೆ ನಮ್ಮ ದೇಶದ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಎಡಪಕ್ಷಗಳಾದ ನಾವು, ಅಮೆರಿಕದ ಆಕ್ರಮಣದ ವಿರುದ್ಧ ಮತ್ತು ಲ್ಯಾಟಿನ್ ಅಮೆರಿಕದ ಜನರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಎಚ್.ಎ.ರಾಮಲಿಂಗಪ್ಪ, ಬಿಳ್ಳೂರು ನಾಗರಾಜ್, ಜಿ. ಕೃಷ್ಣಪ್ಪ, ವೆಂಕಟರಾಂ, ಬಿ.ಎಚ್. ರಫೀಕ್, ಕೆ. ಮುನಿಯಪ್ಪ, ಸೋಮಶೇಖರರೆಡ್ಡಿ, ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.