ADVERTISEMENT

ಹಳೇ ವೈಷಮ್ಯ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ: ಬೆಚ್ಚಿಬಿದ್ದ ಜನರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 15:48 IST
Last Updated 14 ಅಕ್ಟೋಬರ್ 2019, 15:48 IST
ಘಟನೆಯಲ್ಲಿ ಚೇತನ್ಕುಮಾರ್ರವರ ಕೈಭಾಗದಲ್ಲಿ ಗಾಯವಾಗಿರುವುದು.
ಘಟನೆಯಲ್ಲಿ ಚೇತನ್ಕುಮಾರ್ರವರ ಕೈಭಾಗದಲ್ಲಿ ಗಾಯವಾಗಿರುವುದು.   

ಬಾಗೇಪಲ್ಲಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗೆ ಚೂರಿ ಹಾಕಿದ ಯುವಕರ ಗುಂಪು, ದ್ವಿಚಕ್ರ ವಾಹನ ಸುಟ್ಟುಹಾಕಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಪಟ್ಟಣದ ಶಾದಿಮಹಲ್ ಪಕ್ಕದ ನಿವಾಸಿಯಾಗಿರುವ ಚೇತನ್‌ಕುಮಾರ್ ಎಂಬುವವರ ಹಾಗೂ ಪಟ್ಟಣದ ಕಾರ್ತಿಕ್ ಹಾಗೂ ಸಹಚರರ ನಡುವೆ ಹಳೇ ವೈಷಮ್ಯವೇ ಘಟನೆಗೆ ಕಾರಣವಾಗಿದೆ.

ದಾವಣಗೆರೆ ಕೋ–ಆಪರೇಟಿವ್ ಸೂಸೈಟಿಯಲ್ಲಿ ಚೇತನ್‌ಕುಮಾರ್ ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ಶಾದಿ ಮಹಲ್ ಪಕ್ಕದಲ್ಲಿ ಇರುವ ಮನೆಗೆ ದ್ವಿಚಕ್ರ ವಾಹನದಲ್ಲಿ ಚೇತನ್‌ಕುಮಾರ್ ಸಂಚರಿಸುವ ಮಾರ್ಗದಲ್ಲಿ ಪಟ್ಟಣದ ಕಾಪೋರೇಷನ್ ಬ್ಯಾಂಕ್‌ನ ಬಳಿ 3 ದ್ವಿಚಕ್ರ ವಾಹನಗಳಲ್ಲಿ ಬಂದ ಕಾರ್ತಿಕ್, ಮುಜಾಮಿಲ್ ಸಹಚರರು ಚೇತನ್‌ಕುಮಾರ್‌ನನ್ನು ಅಡ್ಡಗಟ್ಟಿ ಏಕಾಏಕಿ ಚಾಕುವಿನಿಂದ ತೀವ್ರ ಹಲ್ಲೆಗೆ ಮುಂದಾಗಿದ್ದಾರೆ. ಚೇತನ್‌ ಕೈ ಭಾಗಕ್ಕೆ ತೀವ್ರವಾದ ಗಾಯ ಆಗಿದ್ದು, ದ್ವಿಚಕ್ರ ವಾಹನವನ್ನು ಬಿಟ್ಟು ಓಡಿಹೋಗಿದ್ದಾರೆ.

ADVERTISEMENT

ನಂತರ ರೊಚ್ಚಿಗೆದ್ದ ಕಾರ್ತಿಕ್ ಹಾಗೂ ಸಹಚರರು ಚೇತನ್‌ಕುಮಾರ್‌ನ ದ್ವಿಚಕ್ರ ವಾಹನವನ್ನು ಚಿತ್ರಾವತಿ ಮೇಲುಸೇತುವೆ ಪಕ್ಕದ ಏಟಗಡ್ಡಪಲ್ಲಿ ಗ್ರಾಮದ ಮಾರ್ಗ ರಸ್ತೆಯ ಪಕ್ಕದ ಗುಂಡಿಗೆ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚೇತನ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಚ್ಚಿ ಬಿದ್ದ ಜನ: ತಾಲ್ಲೂಕಿನಲ್ಲಿ ಹಲವಾರು ದಿನಗಳಿಂದ ಯಾವುದೇ ಗಲಾಟೆಗಳು ಇಲ್ಲದೇ ಶಾಂತಿಯುತ ವಾತಾವರಣ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಪುಡಿರೌಡಿಗಳು ಸೃಷ್ಠಿ ಆಗಿ, ಕಾನೂನುಗಳ ಭಯ ಇಲ್ಲದೇ ಕಳ್ಳತನ, ಡಕಾಯಿತಿ, ಧರೋಡೆ, ಗಲಾಟೆಗಳು, ತೀವ್ರ ಹಲ್ಲೆ ಮಾಡಲು ಮುಂದಾಗಿರುವುದು ಪಟ್ಟಣದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.