ADVERTISEMENT

ಚಿಂತಾಮಣಿ ಗ್ರಾಮೀಣ ಠಾಣೆಯಲ್ಲಿ ಹೆಚ್ಚು ಪ್ರಕರಣ ದಾಖಲು

2023ರಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾದ ಠಾಣೆ; ಚಿಕ್ಕಬಳ್ಳಾಪುರ ಸಂಚಾರ ಠಾಣೆಯಲ್ಲಿ ಕಡಿಮೆ ಪ್ರಕರಣ

ಡಿ.ಎಂ.ಕುರ್ಕೆ ಪ್ರಶಾಂತ
Published 26 ಜನವರಿ 2024, 6:47 IST
Last Updated 26 ಜನವರಿ 2024, 6:47 IST
ಡಿ.ಎಲ್.ನಾಗೇಶ್
ಡಿ.ಎಲ್.ನಾಗೇಶ್   

ಚಿಕ್ಕಬಳ್ಳಾಪುರ: ಜಿಲ್ಲೆಯು ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಅಲ್ಲದೆ ರಾಜಧಾನಿ ಬೆಂಗಳೂರಿಗೂ ಸಮೀಪದ ಜಿಲ್ಲೆ. ಇಂತಹ ಜಿಲ್ಲೆಯಲ್ಲಿ ಒಟ್ಟು 21 ಪೊಲೀಸ್ ಠಾಣೆಗಳು ಇವೆ. ಈ ಠಾಣೆಗಳ ಪೈಕಿ 2023ರಲ್ಲಿ ಅತಿ ಹೆಚ್ಚು ಪ್ರಕರಣಗಳು ಚಿಂತಾಮಣಿ ಗ್ರಾಮಾಂತರ ಗ್ರಾಮಾಂತರ  ಠಾಣೆಯಲ್ಲಿ ದಾಖಲಾಗಿವೆ. 

ವ್ಯಾಪ್ತಿಯ ದೃಷ್ಟಿಯಿಂದಲೂ ದೊಡ್ಡದು ಎನಿಸಿರುವ ಚಿಂತಾಮಣಿ ಗ್ರಾಮಾಂತರ ಠಾಣೆಯು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಠಾಣೆ ಎನಿಸಿದೆ. ಜಿಲ್ಲೆಯಲ್ಲಿ 2023ರಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾದ ಠಾಣೆಯ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ ಸ್ಥಾನ ಪಡೆದಿದೆ. 

ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ 535 ಪ್ರಕರಣಗಳು ದಾಖಲಾಗುವ ಮೂಲಕ ಮೊದಲ ಸ್ಥಾನದಲ್ಲಿ ಇದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ 387, ಶಿಡ್ಲಘಟ್ಟ ಗ್ರಾಮಾಂತರ ಠಾಣೆ 326, ಗೌರಿಬಿದನೂರು ಗ್ರಾಮಾಂತರ ಠಾಣೆ 277 ಮತ್ತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ 254 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೊದಲ ಐದು ಠಾಣೆಗಳಲ್ಲಿ ಇವು ಸ್ಥಾನ ಪಡೆದಿವೆ. 

ADVERTISEMENT

ಕಡಿಮೆ ಪ್ರಕರಣದ ಠಾಣೆಗಳು:

2023ರಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾದ ಠಾಣೆಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಸಂಚಾರ ಠಾಣೆ ಮೊದಲ ಸ್ಥಾನದಲ್ಲಿ ಇದೆ. ಇಲ್ಲಿ 82 ಪ್ರಕರಣಗಳು ದಾಖಲಾಗಿವೆ. ಪಾತಪಾಳ್ಯ ಠಾಣೆಯಲ್ಲಿ 105, ಚೇಳೂರು 121, ಬಟ್ಲಹಳ್ಳಿ ಠಾಣೆಯಲ್ಲಿ 131 ಮತ್ತು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ 137 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ದಾಖಲಾದ ಮೊದಲ ಐದು ಠಾಣೆಗಳಲ್ಲಿ ಇವು ಸ್ಥಾನ ಪಡೆದಿವೆ. 

ಶಿಡ್ಲಘಟ್ಟ ಗ್ರಾಮಾಂತರ ಠಾಣೆಯು ಅತಿ ಹೆಚ್ಚು ಪ್ರಕರಣ ದಾಖಲಾದ ಮೊದಲ ಐದು ಠಾಣೆಗಳಲ್ಲಿ ಸ್ಥಾನ ಪಡೆದಿದ್ದರೆ, ಶಿಡ್ಲಘಟ್ಟ ನಗರ ಠಾಣೆಯು ಅತಿ ಕಡಿಮೆ ಪ್ರಕರಣ ದಾಖಲಾದ ಮೊದಲ ಐದು ಠಾಣೆಗಳಲ್ಲಿ ಸ್ಥಾನ ಪಡೆದಿದೆ. 

ಈ ಹಿಂದಿನಿಂದಲೂ ಚಿಂತಾಮಣಿ ತಾಲ್ಲೂಕು ಅಪರಾಧ ಮತ್ತು ಅಪಘಾತ ಪ್ರಕರಣಗಳಲ್ಲಿ ಪ್ರಮುಖ ಸ್ಥಳವಾಗಿದೆ. ಅಚ್ಚರಿ ಎಂದರೆ ಚಿಕ್ಕಬಳ್ಳಾಪುರ ಸಂಚಾರ ಠಾಣೆಯಲ್ಲಿ ಇಡೀ ಒಂದು ವರ್ಷಕ್ಕೆ ದಾಖಲಾಗಿರುವುದು ಕೇವಲ 82 ಪ್ರಕರಣಗಳು ಮಾತ್ರ! ಚಿಕ್ಕಬಳ್ಳಾಪುರದಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ.

‘ಹೆದ್ದಾರಿಗಳಿದ್ದ ಕಡೆ ಹೆಚ್ಚಿದ ಅಪರಾಧ’

ಮಹಿಳಾ ಠಾಣೆ ಸಂಚಾರ ಠಾಣೆ ಸೇರಿದಂತೆ ಒಟ್ಟು 21 ಪೊಲೀಸ್ ಠಾಣೆಗಳು ಜಿಲ್ಲೆಯಲ್ಲಿ ಇವೆ. ಕೆಲವು ಠಾಣೆಗಳ ವ್ಯಾಪ್ತಿ ಹೆಚ್ಚಿದೆ. ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳು ವಾಹನ ಸಂಚಾರ ಹೆಚ್ಚಿದ್ದ ಕಡೆ ಅಪಘಾತ ಮತ್ತು ಅಪರಾಧ ಪ್ರಕರಣಗಳು ಸಹ ಹೆಚ್ಚಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.  ತೀರಾ ಒಳಗಿನ ರಸ್ತೆಗಳು ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳು ಸಹ ಕಡಿಮೆ ಇರುತ್ತವೆ. ಜಿಲ್ಲೆಯಲ್ಲಿ 7 112 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಮೂಲಕ ಎಲ್ಲಿಯೇ ಅಪರಾಧ ಕೃತ್ಯಗಳು ನಡೆದಾಗ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ತೆರಳಲಾಗುತ್ತಿದೆ. ಇನ್ನೂ ಬಳಕೆಯ ಅಗತ್ಯವಿದೆ. ಜನರು ಈ ಬಗ್ಗೆ ಹೆಚ್ಚು ಅರಿವು ಹೊಂದಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.