ADVERTISEMENT

ಚಿಂತಾಮಣಿ: ಬಾರ್‌ನಲ್ಲಿ ಕುಡಿದು ಹಣ ಪಾವತಿಸುವ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 14:23 IST
Last Updated 29 ಡಿಸೆಂಬರ್ 2023, 14:23 IST
ಕೊಲೆಯಾದ ಯುವಕ ಹೇಮಂತ್‌ ಕುಮಾರ್
ಕೊಲೆಯಾದ ಯುವಕ ಹೇಮಂತ್‌ ಕುಮಾರ್   

ಚಿಂತಾಮಣಿ: ನಗರದ ಬಾರ್‌ವೊಂದರಲ್ಲಿ ಕುಡಿದು ಹಣ ಪಾವತಿಸುವ ವಿಷಯದಲ್ಲಿ ಶುಕ್ರವಾರ ಮಧ್ಯಾಹ್ನ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ತಾಲ್ಲೂಕಿನ ಬುರುಡಗುಂಟೆ ಗ್ರಾಮದ ಹೇಮಂತ್ ಕುಮಾರ್ (25) ಕೊಲೆಯಾದ ಯುವಕ. ನಗರದ ಜೋಡಿ ರಸ್ತೆಯ ಆರ್.ಆರ್.ವಾಣಿ ಬಾರ್ ಅಂಡ್ ರೆಸ್ಟೋರೆಂಟ್‌ನ ಕ್ಯಾಷಿಯರ್ ರವಿಚಂದ್ರ ಕೊಲೆ ಮಾಡಿರುವ ಆರೋಪಿ. ಕಳೆದ 20 ದಿನಗಳಿಂದ ಹೇಮಂತ್‌ ಕುಮಾರ್ ಮತ್ತು ರವಿಚಂದ್ರ ನಡುವೆ ಗಲಾಟೆ, ಘರ್ಷಣೆ ನಡೆಯುತ್ತಿತ್ತು ಎನ್ನಲಾಗಿದೆ.

ಗುರುವಾರ ರಾತ್ರಿ ಹೇಮಂತ್ ಕುಮಾರ್ ಮತ್ತು ರವಿಚಂದ್ರ ನಡುವೆ ಗಲಾಟೆಯಾಗಿದ್ದು, ಹೇಮಂತ್ ಕುಮಾರ್‌ ಬಾರ್‌ನಲ್ಲಿನ ಗ್ಲಾಸುಗಳನ್ನು ಒಡೆದು ಗಲಾಟೆ ಮಾಡಿದ್ದನು. ಶುಕ್ರವಾರ ಮಧ್ಯಾಹ್ನ ಮತ್ತೆ ಬಾರ್‌ಗೆ ಹೋಗಿ ಕುಡಿದು ಹಣ ನೀಡದೆ ಗಲಾಟೆ ಮಾಡಿದ್ದಾನೆ. ಅವರಿಬ್ಬರ ನಡುವೆ ಘರ್ಷಣೆ ನಡೆದಿದೆ. ಹೇಮಂತ್ ಕುಮಾರ್ ಚಾಕುವಿನಿಂದ ರವಿಚಂದ್ರ ಅವರಿಗೆ ಚುಚ್ಚಲು ಯತ್ನಿಸಿದ್ದಾನೆ. ರವಿಚಂದ್ರ ಹೇಮಂತ್ ಕುಮಾರ್‌ನಿಂದ ಅದೇ ಚಾಕುವನ್ನು ಕಸಿದುಕೊಂಡು ಹಾಡುಹಗಲೇ ಹಲ್ಲೆ ನಡೆಸಿದ್ದಾನೆ.

ADVERTISEMENT

ಹೇಮಂತ್ ಕುಮಾರ್ ತಪ್ಪಿಸಿಕೊಂಡು ಹೊರಕ್ಕೆ ಬಂದು ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಕೊಠಡಿಯಲ್ಲಿ ಅವಿತುಕೊಂಡರೂ, ರವಿಚಂದ್ರ ಅಲ್ಲಿಗೂ ಧಾವಿಸಿ ಚಾಕುವಿನಿಂದ ಅನೇಕ ಬಾರಿ ತಿವಿದು ಕೊಲೆ ಮಾಡಿದ್ದಾನೆ. ಹೇಮಂತ್‌ ಕುಮಾತ್‌ ಮೃತಪಟ್ಟ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.

ಕೊಲೆಯಾದ ಹೇಮಂತಕುಮಾರ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದನು. ಸ್ಥಳಕ್ಕೆ ಡಿವೈಎಸ್‌ಪಿ ಶಿವಕುಮಾರ್, ಇನ್‌ಸ್ಪೆಕ್ಟರ್ ರಂಗಶಾಮಯ್ಯ ಸಿಬ್ಬಂದಿಯೊಂದಿಗೆ ಕೂಡಲೇ ಧಾವಿಸಿ ಬಂದು ಶವವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆರೋಪಿ ರವಿಚಂದ್ರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ. 2022ರ ಅಕ್ಟೋಬರ್‌ನಲ್ಲಿ ನಗರದ ಕನಂಪಲ್ಲಿಯಲ್ಲಿ ನಡೆದಿದ್ದ ದುರ್ಗೇಶ್ ಕೊಲೆಯಲ್ಲಿ ಹೇಮಂತ್ ಕುಮಾರ್ ಪ್ರಥಮ ಆರೋಪಿಯಾಗಿದ್ದನು.

ಗ್ರಾಮದಲ್ಲಿ ಮನೆ ಕಟ್ಟುತ್ತಿದ್ದು, ಮೆಷ್ ತರುವುದಾಗಿ ತಿಳಿಸಿ ಗುರುವಾರ ಊರಿನಿಂದ ಹೇಮಂತ್‌ ಕುಮಾರ್ ಬಂದಿದ್ದನು. ಚೆನ್ನಾಗಿ ಕುಡಿಸಿ ಗಲಾಟೆ ಮಾಡಿಕೊಂಡು ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಬೇಕು ಎಂದು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಮೃತನ ತಾಯಿ ನಾಗಮ್ಮ ಆರೋಪಿಸಿದರು.

ಕೊಲೆ ಆರೋಪಿ ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.