ADVERTISEMENT

ಜಡಿಮಳೆಗೆ ಮುದುಡಿದ ಜೀವನ: ಬೆಳೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 5:33 IST
Last Updated 8 ಡಿಸೆಂಬರ್ 2020, 5:33 IST
ಜಡಿಮಳೆಗೆ ಚೇಳೂರಿನ ಎಂಜಿ ವೃತ್ತ ಕೆಸರು ಗದ್ದೆಯಾಗಿದೆ
ಜಡಿಮಳೆಗೆ ಚೇಳೂರಿನ ಎಂಜಿ ವೃತ್ತ ಕೆಸರು ಗದ್ದೆಯಾಗಿದೆ   

ಚೇಳೂರು: ಜಿಲ್ಲಾದ್ಯಂತ ಜಡಿಮಳೆಗೆ ಜನಜೀವನ ಮುದುಡಿದೆ‌. ಕೆಲವು ದಿನಗಳಿಂದ ಆರಂಭವಾದ ಜಡಿಮಳೆ ಒಂದು ವಾರ ಕಳೆದರೂ ಇನ್ನೂ ನಿಂತಿಲ್ಲ. ದಿನವಿಡೀ ನಿತ್ಯ ಸುರಿಯುತ್ತಿರುವ ಜಡಿಮಳೆ ಜನತೆಯನ್ನು ಹೈರಾಣಾಗಿಸಿದೆ. ಜೊತೆಗೆ ಬೆಳೆಗಳಿಗೂ ಹಾನಿಯಾಗಿದೆ.

ಸೋಮವಾರ ಚೇಳೂರು ತಾಪಮಾನ ಕನಿಷ್ಠ 20 ಡಿಗ್ರಿಯಿಂದ ಗರಿಷ್ಠ 24 ಡಿಗ್ರಿ ದಾಖಲಾಗಿತು. ಸೂರ್ಯನ ಕಿರಣವನ್ನೇ ಕಾಣದೇ ಮೋಡ ಮುಸುಕಿದ ಚುಮುಚುಮು ಚಳಿಯ ತಂಪಾದ ವಾತಾವರಣ ಮಲೆನಾಡನ್ನೂ ಹಿಮ್ಮೆಟ್ಟಿಸುವಂತಿದೆ.

ಜಡಿಮಳೆಗೆ ಜನತೆ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೆಲಸ ಕಾರ್ಯಗಳಿದ್ದಲ್ಲಿ ಮಾತ್ರ ಮನೆಬಿಟ್ಟು ಹೊರಬರುತ್ತಿದ್ದಾರೆ. ಜಡಿ ಮಳೆ ಸುರಿಯುತ್ತಿದ್ದ ಸಂದರ್ಭಗಳಲ್ಲಂತೂ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಹೊರಗಡೆ ಬಂದವರು ಕೂಡ ಚಳಿಯಿಂದ ಬೆಚ್ಚಗಿರಲು ಸ್ವೆಟರ್‌ಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ.

ADVERTISEMENT

ಕೆಸರು ಗದ್ದೆಯಾದ ರಸ್ತೆಗಳು: ಚೇಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದಲ್ಲಿ ತುಂತುರು ಮಳೆ ಬೀಳುತ್ತಿದೆ. ಆಗೊಮ್ಮೆ ಈಗೊಮ್ಮೆ ಸಾಧಾರಣೆ ಮಳೆಯಾಗುತ್ತಿದೆ. ಮಳೆಯ ಪರಿಣಾಮ ರಸ್ತೆಯು ಸಂಪೂರ್ಣ ಕೆಸರು ಗೆದ್ದಯಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ವಾಹನ ಸವಾರರು ಜಾರಿ ಬೀಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.

ಪಟ್ಟಣದ ಎಂ.ಜಿ.ವೃತ್ತದಲ್ಲಿ ಎಎಸ್ಐ ನಾಗರಾಜ್ ಮತ್ತು ಪೋಲಿಸ್ ಸಿಬ್ಬಂದಿ ಹಲವು ಜಾರುವ ರಸ್ತೆಯ ಬಗ್ಗೆ ಎಚ್ಚರಿಕೆಯ ಸಂದೇಶ ಹಾಕಿ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಗಾಲ ಮುಗಿಯುವವರೆಗೆ ಜಾರುವ ರಸ್ತೆಗಳಲ್ಲಿ ಸಂಚಾರ ಪೊಲೀಸರು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.