ADVERTISEMENT

ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 16:11 IST
Last Updated 14 ಜನವರಿ 2026, 16:11 IST
ಶಿಡ್ಲಘಟ್ಟದ ನಗರಸಭೆ ಮುಂದೆ ಕಣ್ಣೀರಿಟ್ಟ ಪೌರಾಯುಕ್ತೆ ಜಿ.ಅಮೃತಾ
ಶಿಡ್ಲಘಟ್ಟದ ನಗರಸಭೆ ಮುಂದೆ ಕಣ್ಣೀರಿಟ್ಟ ಪೌರಾಯುಕ್ತೆ ಜಿ.ಅಮೃತಾ   

ಶಿಡ್ಲಘಟ್ಟ: ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಫ್ಲೆಕ್ಸ್‌ ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿದ್ದಾರೆ.

ಈ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ರಾಜೀವ್ ಗೌಡ ವರ್ತನೆಯ ಬಗ್ಗೆ ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಂಗಳವಾರ ಸಂಜೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಈ ರಸ್ತೆಯಲ್ಲಿ ಸಾಗುವಾಗ ವಾಹನಕ್ಕೆ ಈ ಫ್ಲೆಕ್ಸ್ ಅಡ್ಡಿಯಾಗಿದೆ. ಸಾರ್ವಜನಿಕರಿಂದ ದೂರು ಬಂದ ಕಾರಣ ಫ್ಲೆಕ್ಸ್ ಅನ್ನು ನಗರಸಭೆ ಸಿಬ್ಬಂದಿ ಕಚೇರಿಗೆ ತಂದಿಟ್ಟಿದ್ದರು. ಈ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ರಾಜೀವ್ ಗೌಡ ಬೆಂಬಲಿಗ ಅಫ್ಸರ್‌ ಪಾಷಾಗೆ ಪೌರಾಯುಕ್ತರು ಮಾಹಿತಿ ನೀಡಿದ್ದರು.

ADVERTISEMENT

ಫ್ಲೆಕ್ಸ್ ಬಿಚ್ಚಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜೀವ್ ಗೌಡ, ಪೌರಾಯುಕ್ತೆಗೆ ಕರೆ ಮಾಡಿ ಜಟಾಪಟಿ ನಡೆಸಿದ್ದಾರೆ.

‘ನಮ್ಮ ಬ್ಯಾನರ್ ಬಿಚ್ಚಿಸಿದರೆ ಬೆಂಕಿ ಹಚ್ಚಿಸುವೆ. ನನ್ನ ಒಳ್ಳೆಯತನ ನೋಡಿದ್ದೀರಿ ಕೆಟ್ಟತನ ನೋಡಿಲ್ಲ’ ಎಂದು ಪೌರಾಯುಕ್ತೆಯ ವಿರುದ್ಧ ಹರಿಹಾಯ್ದಿದ್ದಾರೆ.

ಆಗ ಪೌರಾಯುಕ್ತೆ ಅಮೃತಗೌಡ ಅವರು, ‘ರಸ್ತೆಯಲ್ಲಿ ಕಟ್ಟಿದ್ದಾರೆ. ಸಾರ್ವಜನಿಕರಿಂದ ದೂರು ಬಂದಿದೆ. ಅನುಮತಿ ಪಡೆಯದೆ ಬ್ಯಾನರ್ ಕಟ್ಟಿದ್ದಾರೆ. ಅಪಘಾತ ಆದರೆ ನಾವು ಹೊಣೆ...’ ಎಂದು ಹೇಳಿದ್ದಾರೆ.

ಆಗ ಮತ್ತಷ್ಟು ಕುಪಿತರಾದ ರಾಜೀವ್ ಗೌಡ, ‘ಬೆಂಕಿ ಹಚ್ಚಿಸುವೆ, ಚಪ್ಪಲಿಯಲ್ಲಿ ಹೊಡೆಸುವೆ, ....ಮಗ... ’ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಅವರನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಜೀವ್ ಗೌಡ 2023ರ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಪತ್ನಿ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾರೆ.

ಪ್ರತಿಭಟನೆ: ನಗರಸಭೆ ಮುಂದೆ ಪೌರಕಾರ್ಮಿಕರು ಮತ್ತು ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿ, ‘ರಾಜೀವ್ ಗೌಡಾಕೋ ಹಠಾವೋ ಶಿಡ್ಲಘಟ್ಟಕೋ ಬಚಾವೋ’ ಎಂಬ ಫಲಕ ಹಿಡಿದು ರಾಜೀವ್ ಗೌಡ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ರಾಜೀವ್ ಗೌಡ ಬಂದು ಸರ್ಕಾರಿ ನೌಕರರಾದ ಪೌರಕಾರ್ಮಿಕರನ್ನು ಏಕೆ ನಿಂದಿಸಿದ್ದಾರೆಂದು ಕಾರಣ ಕೊಟ್ಟು ಕ್ಷಮೆ ಕೇಳಬೇಕು. ಅದುವರೆಗೂ ನಾವು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ದೂರು ದಾಖಲು:

ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಜಿ.ಅಮೃತಾ, ಜೆಡಿಎಸ್ ಉಪಾಧ್ಯಕ್ಷ ಶ್ರೀನಿವಾಸಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ದೂರು ದಾಖಲಿಸಿದ್ದಾರೆ. 

‘ಶಿಡ್ಲಘಟ್ಟ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರು ಒಬ್ಬ ಮಹಿಳಾ ಅಧಿಕಾರಿಯನ್ನು ಕೆಟ್ಟದಾಗಿ ದೂರವಾಣಿಯಲ್ಲಿ ಮಾತನಾಡಿರುವುದನ್ನು ಖಂಡಿಸುತ್ತೇನೆ. ಜನಪ್ರತಿನಿಧಿಯಾಗಲು ಬಂದ ರಾಜಕಾರಣಿ ಮಹಿಳೆ ಬಗ್ಗೆ ಗೌರವದಿಂದ ನಡೆದುಕೊಳ್ಳದೆ ಗೂಂಡಾ ರೀತಿ ನಡೆದುಕೊಂಡಿರುವುದು ಇಡೀ ಕಾಂಗ್ರೆಸ್ ಪಕ್ಷವೇ ತಲೆ ತಗ್ಗಿಸುವಂತೆ ಆಗಿದೆ. ಪೌರಾಯುಕ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಶಾಸಕನಾಗಿರುವ ನನ್ನನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಈ ಬಗ್ಗೆ ಜೆಡಿಎಸ್ ಮುಖಂಡರು ಪ್ರಕರಣ ದಾಖಲಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗೂ ಈ ರೀತಿಯ ತೊಂದರೆಯಾಗಂತೆ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದರು.

ಶಿಡ್ಲಘಟ್ಟದ ನಗರಸಭೆ ಮುಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಪ್ರತಿಭಟನೆ
ಜನರ ಸೇವೆ ಮಾಡುವ ಸರ್ಕಾರಿ ನೌಕರರಾದ ನಾವು ಕನಿಷ್ಟ ಗೌರವವನ್ನಾದರೂ ಬಯಸುತ್ತೇವೆ. ನಮ್ಮ ತಾಯಿ ಮತ್ತು ನಮ್ಮ ಪೌರಕಾರ್ಮಿಕರ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ನಿಜಕ್ಕೂ ನೋವಾಗುತ್ತದೆ. ಹಾಗೆಲ್ಲಾ ಮಾತನಾಡಬೇಡಿ ಸರ್ ಎಂದು ಸಹ ಹೇಳಿದೆ. ಈ ರೀತಿಯ ಬೈಗುಳಗಳನ್ನು ಕೇಳಿಸಿಕೊಳ್ಳಲು ಹಿಂಸೆಯಾಗುತ್ತದೆ
-ಜಿ.ಅಮೃತಾ, ಪೌರಾಯುಕ್ತೆ
ಅಚಾತುರ್ಯದಿಂದ ದುಡುಕಿ ಆ ರೀತಿ ಮಾತನಾಡಿದ್ದೇನೆ. ನಾವು ಕಟ್ಟಿಸಿದ್ದ ಫ್ಲೆಕ್ಸ್ ಗಳನ್ನು ನಗರಸಭೆಯವರು ತೆಗೆಯುತ್ತಿದ್ದಾರೆ ಎಂಬ ಮಾಹಿತಿ ಬಂದಾಗ ಕೋಪಗೊಂಡು ಆ ರೀತಿ ತಪ್ಪಾಗಿ ನಡೆದುಕೊಂಡಿರುವೆ. ಪೌರಾಯುಕ್ತೆ ನನ್ನ ಸಹೋದರಿಯಿದ್ದಂತೆ. ನನ್ನಿಂದ ತಪ್ಪಾಗಿದೆ. ಪೌರಾಯುಕ್ತೆ ಅವರನ್ನು ಬಹಿರಂಗವಾಗಿ ಕ್ಷಮೆ ಕೋರುತ್ತೇನೆ
-ರಾಜೀವ್ ಗೌಡ, ಕೆಪಿಸಿಸಿ ಸಂಯೋಜಕ
ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಪ್ಪು ಮಾಡಿದವರು ಕ್ಷಮೆ ಕೇಳಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು
ಡಿ.ಕೆ. ಶಿವಕುಮಾರ್,,ಉಪ ಮುಖ್ಯಮಂತ್ರಿ
ಮಹಿಳಾ ಅಧಿಕಾರಿಗಳ ಮೇಲೆ ಪದೇ, ಪದೇ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮಾತು ಮತ್ತು ನಾಲಿಗೆ ಮೇಲೆ ರಾಜಕಾರಣಿಗಳಿಗೆ ಹಿಡಿತ ಇರಬೇಕು. ಮಹಿಳಾ ಅಧಿಕಾರಿಗಳು ತಪ್ಪು ಮಾಡಿದರೆ ಹೇಳಲು ರೀತಿ, ನೀತಿಗಳಿವೆ. ಭಾಷೆ ಸಂಸ್ಕೃತಿ ಹೇಳುತ್ತದೆ.
– ಡಾ.ಕೆ.ಸುಧಾಕರ್, ಸಂಸದ
ಪೌರಾಯುಕ್ತೆ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಬೆಂಕಿ ಹಚ್ಚುವುದಾಗಿ ಕಾಂಗ್ರೆಸ್ ಮುಖಂಡ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಶ್ಲೀಲವಾಗಿ ನಿಂದಿಸಿದ್ದಾನೆ. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿಲ್ಲ
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.