ADVERTISEMENT

ಅಂಬೇಡ್ಕರ್, ವಾಲ್ಮೀಕಿ ಪುತ್ಥಳಿ ವಿಚಾರವಾಗಿ ಗಲಾಟೆ; ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:32 IST
Last Updated 27 ಏಪ್ರಿಲ್ 2025, 15:32 IST
   

ಗೌರಿಬಿದನೂರು: ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಅವರ ಪುತ್ಥಳಿ ವಿವಾದ ತೀವ್ರ ಸಂಘರ್ಷದ ಸ್ವರೂಪ ಪಡೆದಿದೆ. ಗ್ರಾಮದಲ್ಲಿ ಉದ್ವಿಗ್ವ ಸ್ಥಿತಿ ಇದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 150 ಕ್ಕೂ ಹೆಚ್ಚು ಪೊಲೀಸರು ಬೀಡು ಬಿಟ್ಟಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲಿ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ತಹಶೀಲ್ದಾರ್ ಮಹೇಶ್ ಪತ್ರಿ ಸೇರಿದಂತೆ  ಅಧಿಕಾರಿಗಳು ನಡೆಸಿದ ಶಾಂತಿ ಸಭೆಯೂ ವಿಫಲವಾಗಿದೆ.

ಎರಡೂ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆಸುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು. 

ADVERTISEMENT

ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಹೀಗೆ: ಸಿದ್ದಗಂಗಮ್ಮ ಎಂಬುವವರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶನಿಮಹಾತ್ಮ ದೇವಸ್ಥಾನಕ್ಕೆ ನಿವೇಶನ ದಾನ ನೀಡಿದ್ದರು. ಈ ನಿವೇಶನದಲ್ಲಿ ಪರಿಶಿಷ್ಟ ಜಾತಿಯವರು ಶನಿವಾರ ರಾತ್ರಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ವಾಲ್ಮೀಕಿ ಸಮುದಾಯದವರು ಭಾನುವಾರ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿಯೇ ಮಹರ್ಷಿ ವಾಲ್ಮೀಕಿಯ ಭಾವಚಿತ್ರವಿರುವ ನಾಮಫಲಕ ನಿಲ್ಲಿಸಿದ್ದಾರೆ.

ಆಗ ಎರಡೂ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಮಹರ್ಷಿ ವಾಲ್ಮೀಕಿ ನಾಮಫಲಕ ಅಡ್ಡವಿದೆ. ಆದ್ದರಿಂದ ನಾಮಫಲಕವನ್ನು ಪಕ್ಕಕ್ಕೆ ಸರಿಸಬೇಕು ಎಂದು ಪರಿಶಿಷ್ಟ ಜಾತಿ ಮುಖಂಡರು ಮನವಿ ಮಾಡಿದರು.

ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಮಹರ್ಷಿ ವಾಲ್ಮೀಕಿ ನಾಮಫಲಕವನ್ನು, ಅಂಬೇಡ್ಕರ್ ಪುತ್ಥಳಿ ಪಕ್ಕದಲ್ಲಿ ನಿಲ್ಲಿಸಿ ಎರಡಕ್ಕೂ ಮಾಲಾರ್ಪಣೆ ಮಾಡಿದರು.

‘ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ದೇವಾಲಯದ ಜಾಗ ಒತ್ತುವರಿ ಮಾಡಿಕೊಂಡು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಸರಿಯಲ್ಲ. ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡರು  ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ, ಶಿವಕುಮಾರ್, ವೃತ ನಿರೀಕ್ಷಕ ಸತ್ಯನಾರಾಯಣ, ಸಶಸ್ತ್ರ ಮೀಸಲುಪಡೆಯೊಂದಿಗೆ  ಗ್ರಾಮಕ್ಕೆ ಬಂದು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಎರಡೂ ಗುಂಪುಗಳ ಮುಖಂಡರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಮಾತುಕತೆ ವಿಫಲವಾಗಿದ್ದು, ಸೋಮವಾರ ಶಾಂತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈ ಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್ ಮಹೇಶ್ ಎಸ್.ಪತ್ರಿ, ಜಾಗದ ದಾಖಲೆಗಳ ಪರಿಶೀಲಿಸಿದರು.

‘ಸಿದ್ದಗಂಗಮ್ಮ ಅವರಿಗೆ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಈಗಾಗಲೆ ಅವರು ಬೇರೆ ಕಡೆ ವಾಸಿಸುತ್ತಿದ್ದಾರೆ. ಆ ಜಾಗವನ್ನು ಶನಿಮಹಾತ್ಮ ದೇವಾಲಯಕ್ಕೆ ಬಿಟ್ಟಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈ ಗೊಳ್ಳಲಾಗುವುದು’ ಎಂದು ತಹಶೀಲ್ದಾರರು ತಿಳಿಸಿದರು.

ಈ ಖಾಲಿ ನಿವೇಶನದಲ್ಲಿ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಗ್ರಾಮದಲ್ಲಿ ಎರಡು ಸಮುದಾಯಗ: ನಡುವೆ ಘರ್ಷಣೆಗೆ ಕಾರಣವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.