ADVERTISEMENT

ಅಕ್ರಮ ಗಣಿಗೆ ಕಡಿವಾಣ ಹಾಕಿ: ಸಚಿವ ಡಾ.ಕೆ. ಸುಧಾಕರ್ ಜಿಲ್ಲಾಡಳಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 3:34 IST
Last Updated 9 ಜನವರಿ 2021, 3:34 IST
ಸಭೆಯಲ್ಲಿ ‌ಭಾಗವಹಿಸಿದ್ದ ಸಚಿವರು ಹಾಗೂ ಶಾಸಕರು
ಸಭೆಯಲ್ಲಿ ‌ಭಾಗವಹಿಸಿದ್ದ ಸಚಿವರು ಹಾಗೂ ಶಾಸಕರು   

ಚಿಕ್ಕಬಳ್ಳಾಪುರ: ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಖನಿಜ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆಯಲ್ಲಿ ಶುಕ್ರವಾರ ಪಾಲ್ಗೊಂಡು ಸಚಿವರು ಮಾತನಾಡಿದರು.

ಇಲಾಖೆ ಮೂಗಿನ ಅಡಿಯಲ್ಲಿ ಕಾನೂನು ಉಲ್ಲಂಘನೆ ನಡೆಯುತ್ತಿದೆ. ಈ ವರ್ತನೆಯನ್ನು ಸಹಿಸಲು ಆಗುವುದಿಲ್ಲ. ಸರ್ಕಾರಕ್ಕೆ ಬರಬೇಕಾದ ರಾಜಧನ ಸೋರಿಕೆಯನ್ನು ಸಹಿಸಲು ಆಗುವುದಿಲ್ಲ. ಇದಕ್ಕಾಗಿ ರಚಿಸಿರುವ ವಿಶೇಷ ಕಾರ್ಯಪಡೆ ಹಗಲು ರಾತ್ರಿ ಇತರೆ ಇಲಾಖೆಗಳ ಜತೆ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕು. ಲೈಸೆನ್ಸ್ ರದ್ದಿಗೂ ಮೀನಾಮೇಷ ಎಣಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಈ ಚಟುವಟಿಕೆಗಳಿಂದ ಹಾನಿಗೊಳಗಾದ ಪ್ರದೇಶಗಳ ಮರು ನಿರ್ಮಾಣ ಮತ್ತು ಸುಧಾರಣೆಗೆ ವಸೂಲಿ ಮಾಡುವ ರಾಜಧನದ ಬಳಕೆ ಮಾಡಬೇಕಿದೆ. ರಸ್ತೆ, ಆರೋಗ್ಯ ಮತ್ತು ಶಿಕ್ಷಣಕ್ಕೆ ಅದನ್ನು ಬಳಸುವುದು ಸಮಂಜಸ ಎಂದು ಸಲಹೆ ನೀಡಿದರು.

ಆದ್ಯತೆ ಮೇರೆಗೆ ಶಾಸಕರು ತಾವು ಬಯಸುವ ಕಾಮಗಾರಿಗಳ ಪಟ್ಟಿ ನೀಡಿದ್ದಾರೆ. ಹಣಕಾಸು ಲಭ್ಯತೆ ಮೇರೆಗೆ ಕಾಮಗಾರಿಗಳನ್ನು ಅಂತಿಮಗೊಳಿಸುವುದು ಸೂಕ್ತ. ಇಲ್ಲವಾದರೆ ಗುತ್ತಿಗೆದಾರನಿಗೆ ಹಣ ನೀಡುವುದು ಹೇಗೆ? ಈ ಹಿನ್ನೆಲೆಯಲ್ಲಿ ಅಗತ್ಯತೆಗೆ ತಕ್ಕಂತೆ ಕ್ರಿಯಾಯೋಜನೆ ರೂಪಿಸುವುದು ಸಮಂಜಸ ಎಂದು ಸಲಹೆ ನೀಡಿದರು.

ಬಳ್ಳಾರಿ ಜಿಲ್ಲೆಯಂತೆ ಹೆಚ್ಚಿನ ವರಮಾನ ಸಿಗುವುದಿಲ್ಲ. ಹೀಗಾಗಿ ಎಂಟರಿಂದ ಹನ್ನೆರಡು ಕೋಟಿ ಲಭ್ಯ ಇರುವುದರಿಂದ ಅಷ್ಟು ಆದಾಯಕ್ಕೆ ಸೀಮಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಸರ್ಕಾರಕ್ಕೆ ಬರಬೇಕಾದ ಆದಾಯ ಸೋರಿಕೆ ಆಗದಂತೆ ವಸೂಲಿ ಮಾಡಬೇಕು. ಮಾನದಂಡ ಉಲ್ಲಂಘಿಸಿ ಖನಿಜ ಸಾಗಣೆ ಮಾಡುತ್ತಿರುವ ದೂರುಗಳಿವೆ. ಅವುಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಅತಿ ಹೆಚ್ಚು ಚಟುವಟಿಕೆ ಇರುವ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ ಹೆಚ್ಚು ನಿಗಾ ವಹಿಸುವಂತೆ ಆದೇಶಿಸಿದರು.

ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ದಂಡ ವಿಧಿಸಿ. ಆದರೂ ಅದೇ ಚಾಳಿ ಮುಂದುವರಿಸಿದರೆ ಲೈಸೆನ್ಸ್ ರದ್ದಿಗೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಯವರಿಗೆ ಸೂಚನೆ ನೀಡಿದರು.

ಪ್ರತಿ ಕ್ಷೇತ್ರದಲ್ಲಿ 5 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆ ಬಗ್ಗೆ ಶಾಸಕರ ಅಭಿಪ್ರಾಯ ಪಡೆದು ಮುಂದುವರಿಯಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಇದೇ ವೇಳೆ ಶಾಸಕರಾದ ಜಿ.ಕೃಷ್ಣಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.