
ಸೈಕಲ್ ಲೈಬ್ರರಿಯ ಸೈಕಲ್ ಗಳ ಜತೆ ವಿದ್ಯಾರ್ಥಿನಿಯರು
ಶಿಡ್ಲಘಟ್ಟ: ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಕೊಡುತ್ತಿದ್ದ ಸೈಕಲ್‌ಗಳನ್ನು ಈಗ ನೀಡುತ್ತಿಲ್ಲ. ಶಾಲೆಗಳಿಗೆ ಬರಲು ಗ್ರಾಮೀಣ ಭಾಗದ ಮಕ್ಕಳು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಶಾಲೆಯ ಶಿಕ್ಷಕರು ಈ ಸಮಸ್ಯೆಗೆ ಸೈಕಲ್ ಲೈಬ್ರರಿಯ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ಲೈಬ್ರರಿ ಕಲ್ಪನೆ ಮೂಡಿ ಬಂದಿದ್ದು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ. ಕಳೆದ ವರ್ಷ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಏನಾದರೂ ಉಡುಗೊರೆ ನೀಡಲು ಹಣ ಸಂಗ್ರಹ ಮಾಡಿದ್ದರು. ಸಂಗ್ರಹಿಸಿದ ಹಣದಲ್ಲಿ ಏನು ಉಡುಗೊರೆ ಖರೀದಿಸಬೇಕು ಎಂಬ ಸಮಾಲೋಚನೆ ನಡೆಯುವಾಗ ಹೊಳೆದದ್ದೇ ಈ ಸೈಕಲ್ ಲೈಬ್ರರಿ. ಅಂದು ಸಂಗ್ರಹವಾಗಿದ್ದ ಹಣದಲ್ಲಿ 10 ಸೈಕಲ್ ಖರೀದಿಸಿ ಅಗತ್ಯವಿರುವ ಮಕ್ಕಳಿಗೆ ನೀಡಲು ಯೋಜಿಸಿದರು.
ದಾನಿಗಳ ನೆರವು: 10 ಸೈಕಲ್ ಜತೆ ಶಿಕ್ಷಕರು 5 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಉಳಿದ ದಾನಿಗಳು ನೀಡಿದ 10 ಸೈಕಲ್ ಸೇರಿ ಈಗ 25 ಸೈಕಲ್‌ಗಳು ಜತೆಯಾಗಿದೆ. 25 ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ಕೊಡಲಾಗಿದೆ. ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗಿದೆ. ತೀರ ಅಗತ್ಯವಿರುವ ವಿದ್ಯಾರ್ಥಿಗಳಿಗೂ ಸೈಕಲ್ ನೀಡಲಾಗುತ್ತಿದೆ.
ಸೈಕಲ್‌ಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಸೈಕಲ್‌ಗಳನ್ನು ಸರಿಪಡಿಸಿ ಶಾಲೆಗೆ ವಾಪಸ್ ಕೊಡುವ ಷರತ್ತನ್ನು ವಿಧಿಸಲಾಗಿದೆ. ತೀರ ಬಳಕೆಗೆ ಯೋಗ್ಯವಲ್ಲದ ಸೈಕಲ್‌ಗಳನ್ನು ಬಿಟ್ಟು ಹೊಸ ಸೈಕಲ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.
ಹೊಸದಾಗಿ ಬರುವ ದಾನಿಗಳಿಗೆ ಸೈಕಲ್‌ಗಳನ್ನು ಕೊಡಿಸುವಂತೆ ಮನವಿ ಮಾಡಲಾಗುತ್ತಿದ್ದು, ಎಲ್ಲ ಮಕ್ಕಳಿಗೂ ಸೈಕಲ್ ನೀಡುವ ಚಿಂತನೆ ನಡೆಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಾದ್ಯಂತ ಸೈಕಲ್ ಲೈಬ್ರರಿಯನ್ನು ಏಕೆ ಶುರು ಮಾಡಬಾರದು ಎಂಬ ಚರ್ಚೆಗೂ ಇದು ನಾಂದಿ ಹಾಡಿದೆ.
ವಿದ್ಯಾರ್ಥಿಗಳಿಗೆ ಅನುಕೂಲ
ಶಾಲೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರಿಗೆ ನೀಡಲೆಂದು ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹಣದಲ್ಲಿ ಸೈಕಲ್ ಲೈಬ್ರರಿ ಯೋಜನೆ ಮೂಡಿತ್ತು. ಈಗ ಸೈಕಲ್‌ಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ– ಶಿವಶಂಕರ್, ಚೀಮಂಗಲ ಸರ್ಕಾರಿ ಶಾಲೆ ಮುಖ್ಯಶಿಕ್ಷಕ
ಚೀಮಂಗಲದಲ್ಲಿ ಸೈಕಲ್ ಲೈಬ್ರರಿ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅವಶ್ಯವಿರುವ ಶಾಲೆಗಳಲ್ಲಿ ದಾನಿಗಳ ನೆರವು ಪಡೆದು ಸೈಕಲ್ ಲೈಬ್ರರಿ ಮಾಡುವ ಯೋಚನೆ ಇದೆ.– ರಮೇಶ್, ಡಿಡಿಪಿಐ