ADVERTISEMENT

ಚಿಕ್ಕಬಳ್ಳಾಪುರ: ಚಂಡಮಾರುತ ಪರಿಣಾಮ ಜನ ಗಡಗಡ

ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆ; ವ್ಯಾಪಕವಾದ ಚಳಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 8:00 IST
Last Updated 1 ಡಿಸೆಂಬರ್ 2025, 8:00 IST
ಚಳಿಗೆ ಜನರು ಬೆಚ್ಚನೆ ಉಡುಗೆ ತೊಟ್ಟು ರಸ್ತೆಗೆ ಇಳಿದಿರುವುದು
ಚಳಿಗೆ ಜನರು ಬೆಚ್ಚನೆ ಉಡುಗೆ ತೊಟ್ಟು ರಸ್ತೆಗೆ ಇಳಿದಿರುವುದು   

ಚಿಕ್ಕಬಳ್ಳಾಪುರ: ಮಾರುಕಟ್ಟೆ, ರಸ್ತೆಗಳು ಸೇರಿದಂತೆ ಎಲ್ಲಿ ನೋಡಿದರೂ ಸ್ಪೆಟರ್‌, ರೈನ್ ಕೋಟ್ ಸೇರಿದಂತೆ ಬೆಚ್ಚನೆಯ ಉಡು‍ಪುಗಳನ್ನು ತೊಟ್ಟ ಜನರು...ಅಬ್ಬಾ ಚಳಿ ಚಳಿ ಎನ್ನುತ್ತಿದ್ದ ಯುವ ಸಮುದಾಯ...ಹೌದು ಚಿಕ್ಕಬಳ್ಳಾಪುರ ನಗರ ಸೇರಿದಂತೆ ಇಡೀ ಜಿಲ್ಲೆಗೆ ಸೂರ್ಯನ ರಶ್ಮಿಗಳು ಪ್ರವೇಶವಾಗಲೇ ಇಲ್ಲ.

‘ದಿತ್ವಾ’ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಮನೆಯಿಂದ ಹೊರಗೆ ಬಾರದಷ್ಟು ಮತ್ತು ಮನೆಯೊಳಗಿದ್ದರೂ ಕಿಟಕಿ ಬಾಗಿಲುಗಳನ್ನು ಮುಚ್ಚುವಷ್ಟು ವಾತಾವರಣ ತಣ್ಣಗಿದೆ.

ಕಳೆದ ಎರಡು–ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿದೆ. ಭಾನುವಾರ ಈ ವಾತಾವರಣ ಮತ್ತಷ್ಟು ತೀವ್ರವಾಗಿತ್ತು. ಜೊತೆಗೆ ತುಂತುರು ಮಳೆ ಸಹ ಸುರಿಯಿತು. ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಳಿಯ ತೀವ್ರತೆಗೆ ಜನ ತರಗುಟ್ಟಿದರು.

ADVERTISEMENT

ಚಳಿಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ರಜೆಯ ದಿನವಾದ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು, ಮಾರುಕಟ್ಟೆಯಲ್ಲಿ ಜನರ ಓಡಾಟ ವಿರಳವಾಗಿತ್ತು. 

ನಗರದ ಹೊರವಲಯದ ಗೌರಿಬಿದನೂರಿನ ಕಣಿವೆ ಪ್ರದೇಶ, ನಂದಿಗಿರಿಧಾಮದ ಸುತ್ತಮುತ್ತ, ಸ್ಕಂದಗಿರಿಯ ಆಸುಪಾಸಿನ ಬೆಟ್ಟಗುಡ್ಡಗಳನ್ನು ಮಂಜು ಮುತ್ತಿಕ್ಕಿತ್ತು. ಇಡೀ ಬೆಟ್ಟಗುಡ್ಡಗಳ ಮೇಲೆಲ್ಲ ಮಂಜು ಇಣುಕಿತ್ತು.‌ ಮಂಜು ಸುರಿಯುವುದು ಹೆಚ್ಚಾಗಿದ್ದು, ಶೀತ ಗಾಳಿ ಬೀಸಿತು.

ಜನರು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಮನೆಯಿಂದ ಹೊರ ಬರುತ್ತಿದ್ದರು. ಸಾಮಾನ್ಯವಾಗಿ ವಾರಾಂತ್ಯರದ ದಿನಗಳಲ್ಲಿ ಸಂಜೆ ಚಾಟ್ಸ್‌ ಸೆಂಟರ್‌ಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದರು. ಆದರೆ ಚಳಿ ಮತ್ತು ತುಂತುರು ಮಳೆಯ ಕಾರಣದಿಂದ ಹೆಚ್ಚು ಜನರು ಮನೆಯಿಂದಲೂ ಹೊರಗೆ ಬರಲಿಲ್ಲ.

ಗೌರಿಬಿದನೂರು ಕಣಿವೆ ಪ್ರದೇಶದಲ್ಲಿ ಬೆಟ್ಟಗಳನ್ನು ಆವರಿಸಿದ ಮಂಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.