ADVERTISEMENT

ಚಿಕ್ಕಬಳ್ಳಾಪುರ | ಒಳಮೀಸಲಾತಿ ವಿಚಾರ; ದಲಿತ ಚಳವಳಿ ನೆಲದಲ್ಲಿ ಶೀತಲ ಸಮರ

ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದವರ ನಡುವೆ ವಿಘಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:19 IST
Last Updated 19 ಆಗಸ್ಟ್ 2025, 5:19 IST
   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಬ್ಬಿರುವ ದಲಿತ ಚಳವಳಿಗಳ ಬೇರುಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೃಹತ್ ಆಗಿಯೇ ಹರಡಿಕೊಂಡಿದೆ. 

ನೆರೆಯ ಆಂಧ್ರಪ್ರದೇಶದ ಜಮೀನ್ದಾರಿ ವ್ಯವಸ್ಥೆಯ ದಟ್ಟ ಪ್ರಭಾವ ಮತ್ತು ಆ ಪ್ರಭಾವದ ವಿರುದ್ಧ ಹೋರಾಟಗಳನ್ನು ಸಂಘಟಿಸುವಲ್ಲಿ ದಲಿತ ಸಂಘರ್ಷ ಸಮಿತಿಯು ಜಿಲ್ಲೆಯಲ್ಲಿ ಪ್ರಮುಖವಾಗಿ ಕೆಲಸ ಮಾಡಿದೆ. ‘ಚಿಕ್ಕಬಳ್ಳಾಪುರಕ್ಕೆ ದಲಿತ ಹೋರಾಟದ ವಿಚಾರದಲ್ಲಿ ಹಿರಿಯಣ್ಣನ ಜವಾಬ್ದಾರಿ ಇದೆ’ ಎಂದು ದಲಿತ ಸಂಘಟನೆಗಳ ಚಿಂತಕರೇ ನುಡಿಯುವರು.

ಇಂತಹ ನೆಲದಲ್ಲಿ ಈಗ ಒಳಮೀಸಲಾತಿ ವಿಚಾರವು ಬಹುಸಂಖ್ಯಾತ ದಲಿತ ಸಮುದಾಯದ ನಡುವೆ ಎಡಗೈ, ಬಲಗೈ ಎನ್ನುವ ಶೀತಲ ಸಮರಕ್ಕೆ ಕಾರಣವಾಗಿದೆ. ಮನಸ್ಸುಗಳನ್ನು ವಿಘಟಿಸಿದೆ. ನಿತ್ಯವೂ ಜಿಲ್ಲೆಯ ಒಂದಲ್ಲಾ ಒಂದು ಕಡೆ ಪರ, ವಿರೋಧದ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿಂದೆ ಒಗ್ಗೂಡಿ ಚಳವಳಿಗಳನ್ನು ನಡೆಸಿದ್ದವರು ಈಗ ಪರಸ್ಪರ ದೂರದಲ್ಲಿ ನಿಂತಿದ್ದಾರೆ.

ADVERTISEMENT

ಚಿಂತಾಮಣಿಯ ಎನ್.ವೆಂಕಟೇಶ್, ಮುನಿಸ್ವಾಮಿ, ದಿ.ನಾರಾಯಣಸ್ವಾಮಿ ದಲಿತ ಸಂಘರ್ಷ ಸಮಿತಿ ಸ್ಥಾಪಕ ಸದಸ್ಯರಾದರೆ, ಗೌರಿಬಿದನೂರಿನ ದಿ.ಬಿ.ಗಂಗಾಧರಮೂರ್ತಿ ಶಿಬಿರಗಳನ್ನು ನಡೆಸಿದವರು. ಹೀಗೆ ಅವಿಭಜಿತ ಕೋಲಾರ ಜಿಲ್ಲೆಗೆ ಚಿಕ್ಕಬಳ್ಳಾಪುರ ಸೇರಿದ ಅವಧಿಯಿಂದಲೂ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿ ತಾಲ್ಲೂಕಿನಲ್ಲಿ ದಲಿತ ಚಳವಳಿಗಳು ಸಶಕ್ತವಾಗಿವೆ.

ನ್ಯಾ.ನಾಗಮೋಹನ ದಾಸ್ ಅವರ ಪರಿಶಿಷ್ಟ ಜಾತಿ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 74,044 ಕುಟುಂಬಗಳಿವೆ. ಒಟ್ಟು 2,96,656 ಜನಸಂಖ್ಯೆ ಇದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರ ಜನಸಂಖ್ಯೆ 50 ಸಾವಿರಕ್ಕಿಂತ ಹೆಚ್ಚಿದೆ. ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತಗಳೇ ಜಿಲ್ಲೆಯಲ್ಲಿ ನಿರ್ಣಾಯಕ ಎನಿಸಿವೆ. 

‘ನಾವು ಯಾರ ವಿರುದ್ಧವೂ ಅಲ್ಲ. ಜನಸಂಖ್ಯೆ ಆಧಾರದಲ್ಲಿ ನಮ್ಮ ಸಮುದಾಯದ ಹಕ್ಕು ಪಡೆಯಲು ಹೋರಾಟ ನಡೆಸಿದ್ದೇವೆ’ ಎನ್ನುವ ಮುಖಂಡರನ್ನು ಮತ್ತು ಸಮುದಾಯದ ಜನರನ್ನು ಖಾಸಗಿಯಾಗಿ ಮಾತನಾಡಿಸಿದರೆ ಮನಸ್ಸುಗಳು ವಿಘಟನೆ ಆಗಿರುವುದು ಸ್ಪಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.