ADVERTISEMENT

ಚಿಕ್ಕಬಳ್ಳಾಪುರ | ‘ಮನುವಾದಿಗಳ ಮನಸ್ಸಿನಲ್ಲಿ ವಿಷ’

ಸಿಜೆಐ ಮೇಲೆ ಶೂ; ದಲಿತ ಸಂಘಟನೆಗಳಿಂದ ಆಕ್ರೋಶ, ವಕೀಲನ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:31 IST
Last Updated 10 ಅಕ್ಟೋಬರ್ 2025, 5:31 IST
ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಘಟನೆ ಖಂಡಿಸಿ ಗುರುವಾರ ನಗರದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟಿಸಿದರು. ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಆಕ್ರೋಶ: ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ  ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟಿಸಿದರು. ಕೂಡಲೇ ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.‌

ದಸಂಸ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ, ಜಾತಿಯ ಅಸಮಾನತೆ ಹಾಗೂ ಅಸಹನೆ ಸಂವಿಧಾನ ಜಾರಿಯಾಗಿ ದಶಕಗಳೇ ಕಳೆದರೂ ಮನುವಾದಿಗಳ ಮನಸ್ಸಿನಲ್ಲಿ ಭದ್ರವಾಗಿದೆ. ಮನುವಾದಿಗಳ ಮನಸ್ಸಿನಲ್ಲಿ ವಿಷವಿದೆ ಎನ್ನುವುದು  ಸಿಜೆಐ ಅವರ ಮೇಲೆ ನಡೆದಿರುವ ಘಟನೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದಲಿತ ಎಂಬ ಕಾರಣಕ್ಕೆ ಗವಾಯಿ ಅವರ ಮೇಲೆ ಕೋಮುವಾದಿ ವಕೀಲ ರಾಕೇಶ್ ಕಿಶೋರ್ ಶೂ ಎಸೆದು ನ್ಯಾಯಾಂಗ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾನೆ ಎಂದು ಕಿಡಿಕಾರಿದರು.

ಮಧ್ಯಪ್ರದೇಶದ ವಿಷ್ಣು ದೇವಾಲಯದಲ್ಲಿ ವಿಷ್ಣುವಿನ ಮೂರ್ತಿಯ ಪುನರ್ ಪ್ರತಿಷ್ಠಾಪನೆ ವಿಚಾರವು ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿದೆ. ಅಲ್ಲಿ ಅರ್ಜಿ ಹಾಕಿ ನ್ಯಾಯಪಡೆಯಬಹುದು ಎಂದು ಪಿಐಎಲ್ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅವರು ವಜಾಗೊಳಿಸಿದ್ದರು. ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರ ತಾಯಿ ನಿರಾಕರಿಸಿದರು ಎಂಬ ಅಂಶದಿಂದ ಕೋಮುವಾದ ಶಕ್ತಿಗಳು ಪೂರ್ವ ನಿಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ನೀಚ ಮನಸ್ಥಿತಿಯುಳ್ಳ ಸನಾತನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ರಾಕೇಶ್ ಕಿಶೋರ್‌ನನ್ನು ಬಂಧಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ  ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಬಿ.ವಿ.ವೆಂಕಟರಮಣ, ಎನ್.ವೆಂಕಟೇಶ್, ಪರಮೇಶ್, ನರಸಿಂಹಮೂರ್ತಿ, ಪೈಪಾಳ್ಯ ಮೂರ್ತಿ, ತಿರುಮಳ್ಳಪ್ಪ, ಶ್ರೀರಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ಕಾರ್ಯಕರ್ತರ ಪ್ರತಿಭಟನೆ

ವಕೀಲನ ಭಾವಚಿತ್ರಕ್ಕೆ ಬೆಂಕಿ ನಗರದ ಅಂಬೇಡ್ಕರ್ ಭವನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಶೂ ಎಸೆದಿರುವ ವಕೀಲ ರಾಕೇಶ್ ಕಿಶೋರ್ ಭಾವಚಿತ್ರ ದಹಿಸಿದರು.  ಸೇನೆ ಅಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ ಮಾತನಾಡಿ ಕೋಮುವಾದಿ ಮನಸ್ಥಿತಿ ವಕೀಲನನ್ನು ಕೂಡಲೇ ಬಂಧಿಸಬೇಕು. ದೇಶದಿಂದಲೇ ಗಡಿಪಾರು ಮಾಡಬೇಕು. ಸಂವಿಧಾನ ಹಾಗೂ ನ್ಯಾಯಪೀಠಗಳಿಗೆ ಅಗೌರವ ತೋರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.  ತಹಶೀಲ್ದಾರ್ ರಶ್ಮಿ ಮೂಲಕ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವೈ.ಶಂಕರ್ ವೈ.ಜೆ.ನರಸಿಂಹಮೂರ್ತಿ ತಿಮ್ಮರಾಜು ಸುರೇಶ್ ಎಸ್.ಬಿ.ಮಂಜುನಾಥ್ ಎನ್.ಬಾಲಕೃಷ್ಣ ರಾಜು ಜಗದೀಶ್ ಎನ್.ನಾರಾಯಣಸ್ವಾಮಿ ದೇವದಾಸ್ ಟಿ.ಬಾಲಯ್ಯ ರೂಪಾ ನಾಗರತ್ನಮ್ಮ ಜ್ಯೋತಿ ಗಂಗಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.