ADVERTISEMENT

ಗೌರಿಬಿದನೂರು: ಅನೈತಿಕ ಸಂಬಂಧಕ್ಕೆ ಅಡ್ಡಿ; ಮಗಳನ್ನೇ ಹತ್ಯೆ ಮಾಡಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:12 IST
Last Updated 27 ಸೆಪ್ಟೆಂಬರ್ 2021, 15:12 IST
ಆರೋಪಿಗಳಾದ ಪ್ಯಾರೇಜಾನ್, ಗುಲ್ಜಾರ ಭಾನು, ಫಯಾಜ್
ಆರೋಪಿಗಳಾದ ಪ್ಯಾರೇಜಾನ್, ಗುಲ್ಜಾರ ಭಾನು, ಫಯಾಜ್   

ಗೌರಿಬಿದನೂರು: ‌ತಾಲ್ಲೂಕಿನ ವಾಟದ ಹೊಸಹಳ್ಳಿ ಗ್ರಾಮದ ಬಾವಿಯಲ್ಲಿ ಸುಮಾರು 20 ದಿನಗಳ ಹಿಂದೆ ಪರ್ವಿನಾ ಮುಬಾರಕ್‌ ಎಂಬ ಮಹಿಳೆಶವ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ಪರ್ವಿನಾ ಹತ್ಯೆಗೆ ಸಂಬಂಧಿಸಿದಂತೆ ಮೃತಳ ದೊಡ್ಡಪ್ಪ ಪ್ಯಾರೇಜಾನ್ (60), ತಾಯಿ ಗುಲ್ಜಾರ ಬಾನು (45), ತಂದೆ ಫಯಾಜ್ (50) ಎಂಬುವವರನ್ನು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆ.5ರಂದು ಪರ್ವಿನಾ ಶವ ಮಣಿವಾಲ ಗ್ರಾಮದ ರಾಜಶೇಖರ್ ಅವರ ತೋಟದ ಬಾವಿಯಲ್ಲಿ ದೊರೆತಿತ್ತು. ರಾಜಶೇಖರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಪ್ರಕರಣದ ಹಿನ್ನೆಲೆ: 10 ವರ್ಷಗಳ ಹಿಂದೆ ಪರ್ವಿನಾ ವಿವಾಹ ನಡೆದಿತ್ತು. ಆದರೆ ಆಕೆ ತನ್ನ ಪತಿಯನ್ನು ತೊರೆದು ತಾನು ಪ್ರೀತಿಸುತ್ತಿದ್ದ ಮಣಿವಾಲ ಗ್ರಾಮದ ಶಿವಪ್ಪ ಎಂಬುವವರ ಜತೆ ಸಂಸಾರ ನಡೆಸುತ್ತಿದ್ದರು. ಶಿವಣ್ಣ ಮೃತಪಟ್ಟ ನಂತರ ವಿನಯ್ ಕುಮಾರ್ ಎಂಬುವವರ ಜತೆ ವಾಸಿಸುತ್ತಿದ್ದರು. ಆತನೂ ಮೃತಪಟ್ಟ ನಂತರ ತವರು ಮನೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ವಿನಾ ತಾಯಿ ಗುಲ್ಜಾರಬಾನು, ತನ್ನ ಅಕ್ಕನ ಗಂಡ ಪ್ಯಾರೇಜಾನ್ ಜತೆ ಅನೈತಿಕ ಸಂಬಂಧ ಹೊಂದಿದ್ದರು. ತನ್ನ ತಾಯಿಯು ಹೊಂದಿದ್ದ ಅಕ್ರಮ ಸಂಬಂಧ ಪರ್ವಿನಾಗೆ ತಿಳಿಯಿತು. ಈ ವಿಚಾರ ಮತ್ತು ಪರ್ವಿನಾ ಈ ಹಿಂದೆ ಹೊಂದಿದ್ದ ಸಂಬಂಧಗಳ ವಿಚಾರವಾಗಿ ಕುಟುಂಬ ಸದಸ್ಯರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಆರೋಪಿಗಳು ಪರ್ವಿನಾ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಶ್ರೀನಿವಾಸಚಾರ್ಲಹಳ್ಳಿ ಬಳಿಯ ಮಾವಿನ ತೋಪಿಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಶವವನ್ನು ಮಣಿವಾಲ ಗ್ರಾಮದ ರಾಜಶೇಖರ್ ಅವರ ತೋಟದ ಬಾವಿಗೆ ಎಸೆದಿದ್ದರು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿಂದೆ ಪರ್ವಿನಾ ಸಂಸಾರ ನಡೆಸಿದ್ದ ಶಿವಪ್ಪ ಅವರ ತಂದೆ ವೆಂಕಟರಮಣಪ್ಪ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದು ಕೊಲೆ ಎಂದು ಹೇಳಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.