ADVERTISEMENT

ಗ್ರಾಮೀಣ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಜಿ

ಜಿಲ್ಲೆಯಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ 2.5 ಲಕ್ಷ ಪಹಣಿಗಳು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:23 IST
Last Updated 30 ಜನವರಿ 2026, 6:23 IST
ಜಿ. ಪ್ರಭು
ಜಿ. ಪ್ರಭು   

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭು ಜಿ ಹೇಳಿದರು.

ತಾಲ್ಲೂಕು ಕಚೇರಿಗೆ ಗುರುವಾರ ಭೇಟಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಕಳೆದ 60–70ವರ್ಷಗಳಿಂದ ಬಾಕಿ ಇರುವ ಜಮೀನುಗಳಿಗೆ ಮಂಜೂರಾತಿ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಕಂದಾಯ ಮತ್ತು ಉಪಕಂದಾಯ ಗ್ರಾಮಗಳಲ್ಲಿ ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ನಾಗರಿಕರಿಗೆ ಶಾಶ್ವತ ಹಕ್ಕುಪತ್ರಗಳನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಲು  ಗ್ರಾಮೀಣ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ADVERTISEMENT

ಜಿಲ್ಲೆಯಲ್ಲಿ 2.5 ಲಕ್ಷ ಪಹಣಿಗಳು ಇನ್ನು ಮರಣ ಹೊಂದಿದವರ ಹೆಸರಿನಲ್ಲಿ ಬರುತ್ತಿವೆ. ಅವರ ವಾರಸುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾವಣೆ ಮಾಡಿ, ಸರ್ಕಾರದ ಪರಿಹಾರಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಜಮೀನುಗಳ ಗಡಿಯನ್ನು ನಿರ್ದಿಷ್ಟವಾಗಿ ಗುರುತಿಸಿ, ಶಾಶ್ವತ ದಾಖಲೆಗಳನ್ನು ಸಂಬಂಧಪಟ್ಟವರಿಗೆ ನೀಡಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮುಂದಿನ ಒಂದು ವರ್ಷದೊಳಗೆ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿನ ಒಟ್ಟಾರೆ ಬಿಪಿಎಲ್‌ ಕಾರ್ಡ್‌ಗಳ ಪೈಕಿ 4,500 ಕಾರ್ಡ್‌ಗಳು ಎಪಿಎಲ್ ಆಗಿವೆ. ಅವುಗಳ ನೈಜತೆ ಆಧರಿಸಿ, ಎಪಿಎಲ್ ಕಾರ್ಡ್‌ಗಳನ್ನು ಬಿಪಿಎಲ್ ಆಗಿ ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂದರು. 

ತಾಲ್ಲೂಕಿನ ಅಭಿಲೇಖಾಲಯಲ್ಲಿರುವ ಹಳೆ ದಾಖಲೆಗಳನ್ನು ಸಂರಕ್ಷಿಸಲು ಗಣಕೀಕೃತ ಕಾರ್ಯ ಚಾಲನೆಯಲ್ಲಿದ್ದು, ಪ್ರಮುಖವಾದ ‘ಎ’ ಕೆಟಗರಿಯ ಎಲ್ಲ ದಾಖಲೆಗಳನ್ನು ಗಣಕೀಕೃತ ಮಾಡಲಾಗಿದೆ. ‘ಬಿ’ ಕೆಟಗರಿ ದಾಖಲೆಗಳ ಕೆಲಸ ಮುಗಿಯುವ ಹಂತದಲ್ಲಿದೆ. ಅಲ್ಲದೆ, ಸಿ ಮತ್ತು ಡಿ ಹಂತದ ಎಲ್ಲ ದಾಖಲೆಗಳನ್ನು ಸಂರಕ್ಷಿಸಲಾಗಿದೆ. ಮುಂದಿನ ಏಳೆoಟು ತಿಂಗಳಲ್ಲಿ ತಾಲ್ಲೂಕಿನಲ್ಲಿ ಎಲ್ಲ ಗಣಕೀಕೃತ ಕಾರ್ಯ ಮುಗಿಯಲಿದೆ. ಬಳಿಕ ಸಾರ್ವಜನಿಕರು ತಮ್ಮ ಜಮೀನಿನ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಹಣ ಪಾವತಿಸಿ, ಕುಳಿತ ಸ್ಥಳದಿಂದಲೇ ಬೇಕಾದ ದಾಖಲೆ ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಅಂದರೆ 10.10 ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಸಕಾಲದಲ್ಲಿ ಬಗೆಹರಿಸಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಜನಸ್ನೇಹಿ ಆಡಳಿತ ಮತ್ತು ಜನಸ್ನೇಹಿ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. 

ಸರ್ಕಾರದ ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆ ಸೇರಿ ಎಲ್ಲ ಇಲಾಖೆಗಳ ಆಡಳಿತ ವ್ಯವಸ್ಥೆ ಸುಧಾರಣೆಗೊಳಿಸಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಮತ್ತು ಗುರಿ ನೀಡಲಾಗಿದೆ. ಹಂತ ಹಂತವಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ತಹಶೀಲ್ದಾರ್ ಅರವಿಂದ್ ಕೆ.ಎಂ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ ಉಪಸ್ಥಿತರಿದ್ದರು.

ಮೂಲಸೌಕರ್ಯ ಕಲ್ಪಿಸಲು ಕ್ರಮ

ತಾಲ್ಲೂಕಿನ ಶೇ 30 ರಿಂದ 40ರಷ್ಟು ಜನರು ನಗರ ಭಾಗದಲ್ಲಿ ವಾಸವಾಗಿದ್ದಾರೆ. ಇವರೆಲ್ಲರಿಗೂ ಶುದ್ಧ ಕುಡಿಯುವ ನೀರು ರಸ್ತೆ ಶಾಲೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಮಾಹಿತಿ ನೀಡಿದರು.  ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಒದಗಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ತಾಲ್ಲೂಕಿನಲ್ಲಿರುವ ನಿವೇಶನ ರಹಿತರಿಗೆ 3 ರಿಂದ 4 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ತಾಲ್ಲೂಕು ಆಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.