ADVERTISEMENT

ಡಿಸಿಸಿ ಬ್ಯಾಂಕ್‌ನಿಂದ ಬಡವರಿಗೆ ಸಿಗದ ಸಾಲ: ಹಕಾರ ಒಕ್ಕೂಟದ ಅಧ್ಯಕ್ಷ ಬೇಸರ

72ನೇ ಅಖಿಲ ಭಾರತದ ಸಹಕಾರ ಸಪ್ತಾಹದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಬೇಸರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:49 IST
Last Updated 18 ನವೆಂಬರ್ 2025, 7:49 IST
ಶಿಡ್ಲಘಟ್ಟದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮ
ಶಿಡ್ಲಘಟ್ಟದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮ   

ಪ್ರಜಾವಾಣಿ ವಾರ್ತೆ

ಶಿಡ್ಲಘಟ್ಟ: ಕೋಲಾರ ಡಿಸಿಸಿ ಬ್ಯಾಂಕ್ ಮಾತ್ರವಲ್ಲದೆ ರಾಜ್ಯದಲ್ಲಿನ ಎಲ್ಲಾ 21 ಡಿಸಿಸಿ ಬ್ಯಾಂಕುಗಳಿಂದ ರೈತರಿಗೆ ಬೆಳೆಸಾಲ ಮತ್ತು ಮಹಿಳಾ ಸಂಘಗಳಿಗೆ ಸಕಾಲಕ್ಕೆ ಸಾಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ನಾಗರಾಜ್ ಬೇಸರ ವ್ಯಕ್ತಪಡಿಸಿದರು. 

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ, ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟ, ಪಿಎಲ್‌ಡಿ ಬ್ಯಾಂಕ್‌ ಆಶ್ರಯದಲ್ಲಿ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ–2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಕಾಲಕ್ಕೆ ಸಾಲ ಸೌಲಭ್ಯ ಸಿಗದ ಕಾರಣದಿಂದಾಗಿ ಅನ್ನದಾತರು ಮತ್ತು ಮಹಿಳಾ ಸ್ವ–ಸಹಾಯ ಸಂಘಗಳಿಗೆ ಬಹಳ ಕಷ್ಟವಾಗುತ್ತಿದೆ ಎಂದು ಹೇಳಿದರು. 

ಈ ಮೊದಲು ಕೃಷಿ ಸಾಲದ ಶೇ 60ರಷ್ಟು ಮೊತ್ತವನ್ನು ಸರ್ಕಾರ ನಬಾರ್ಡ್ ಮೂಲಕ ಮತ್ತು ಬಾಕಿ ಶೇ 40ರಷ್ಟನ್ನು ಬ್ಯಾಂಕ್ ಭರಿಸುತ್ತಿತ್ತು. ಆದರೆ ಇದೀಗ ಸರ್ಕಾರದಿಂದ ಮಾತ್ರವೇ ಶೇ 40ರಷ್ಟು ಸಾಲ ಸಿಗುತ್ತಿದೆ ಎಂದು ದೂರಿದರು. 

ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಕೃಷಿಕರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಜಾತಿ, ಧರ್ಮ ಮತ್ತು ಪಕ್ಷಪಾತ ಮಾಡದೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಪ್ರತಿಯೊಬ್ಬರು ಪಕ್ಷಾತೀತ, ಜಾತ್ಯತೀತವಾಗಿ ನಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಇದು ಬಾಯಿ ಮಾತ್ರವೇ ಸೀಮಿತವಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಹಕಾರ ಕ್ಷೇತ್ರದಲ್ಲಿರುವವರೆಲ್ಲರೂ ಅವರವರ ಪಕ್ಷ, ಪಕ್ಷ ನಾಯಕರಿಗಷ್ಟೇ ನಿಷ್ಠೆಯಾಗಿದ್ದಾರೆ ಎಂದು ದೂರಿದರು. 

ಬ್ಯಾಂಕಿನಲ್ಲಿ ಹೆಚ್ಚು ಠೇವಣಿ ಇಟ್ಟ ಠೇವಣಿದಾರರನ್ನು, ಅತ್ತ್ಯುತ್ತಮ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಅತ್ತ್ಯುತ್ತಮ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಹಿರಿಯ ಸಹಕಾರಿ ಕೆ.ಗುಡಿಯಪ್ಪ, ಪಿ.ಎಲ್‌.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಕೃಷಿ ಪಂಡಿತ ಹುಜಗೂರು ರಾಮಯ್ಯ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಮೇಲೂರು ಮುರಳಿ, ಮಳ್ಳೂರು ಎಸ್‌.ಎಫ್‌.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಮುತ್ತೂರು ಶ್ರೀನಿವಾಸಮೂರ್ತಿ, ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಟಿ.ಎಲ್.ಅಂಬರೀಷ್, ಎಂ.ಮುರಳಿ, ರಾಮಚಂದ್ರಪ್ಪ, ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ರವಿಕಿರಣ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಹಾಜರಿದ್ದರು.

Cut-off box - ಹೆಚ್ಚಿದ ರಾಜಕೀಯ ಹಸ್ತಕ್ಷೇಪ ಇತ್ತೀಚಿನ ವರ್ಷಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪವು ಮಿತಿಮೀರಿದೆ. ಇದರಿಂದಾಗಿ ರೈತರಿಗೆ ಸಕಾಲಕ್ಕೆ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ಚಂದ್ರೇಗೌಡ ಆರೋಪಿಸಿದರು.  ಹಲವು ರೈತರು ಸಾಲ ತೀರಿಸಿ 2–3 ತಿಂಗಳು ಆಗಿದ್ದರೂ ಅವರಿಗೆ ಮತ್ತೆ ಸಾಲ ನೀಡಿಲ್ಲ. ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗರಾಜ್ ಅವರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಲ್ಲದೆ ಅರ್ಹವಿರುವ ರೈತರಿಗೆ ಮತ್ತೆ ಸಾಲ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. 

Cut-off box - ಕೆಲ ಹೊತ್ತು ಗೊಂದಲ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ (ಟಿ.ಎ.ಪಿ.ಸಿ.ಎಂ.ಎಸ್)ವನ್ನು ಪುನರ್ ಆರಂಭಿಸುವ ಬಗ್ಗೆ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಮೇಲೂರು ಮುರಳಿ ಪ್ರಸ್ತಾಪಿಸಿದರು. ಇದಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ನಾಗರಾಜ್ ಧ್ವನಿಗೂಡಿಸಿದರು.  ಅಲ್ಲದೆ ಆಗ ಸಹಕಾರ ರಂಗದಲ್ಲಿದ್ದ ಹಿರಿಯರು ಟಿಎಪಿಸಿಎಂಎಸ್ ಕಟ್ಟಡ ಹರಾಜು ಆಗದಂತೆ ಉಳಿಸಿಕೊಳ್ಳಬಹುದಿತ್ತು ಎಂದು ಆನೂರು ವೀರಪ್ಪ ಸೇರಿ ಇನ್ನಿತರರ ಹೆಸರು ಪ್ರಸ್ತಾಪಿಸಿದರು. ಇದಕ್ಕೆ ಹುಜಗೂರು ರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಕೆಲವರು ಈ ವಿಷಯದ ಪ್ರಸ್ತಾಪ ಇಲ್ಲಿ ಬೇಡ ಎಂದು ಚರ್ಚೆಗೆ ತೆರೆ ಎಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.