ADVERTISEMENT

ಜೀತದಾಳುಗಳ ಸಮಗ್ರ ಪುನರ್ವಸತಿಗೆ ಆಗ್ರಹ

‘ಜೀತ ವಿಮುಕ್ತಿ ಕರ್ನಾಟಕ’ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 14:22 IST
Last Updated 27 ಜನವರಿ 2020, 14:22 IST
ಜೀವಿಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದರು.
ಜೀವಿಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಜೀತದಾಳುಗಳಿಗೆ ಸಮಗ್ರ ಪುನರ್ವಸತಿ ಮತ್ತು ಜೀತ ವಿಮುಕ್ತ ಬಿಡುಗಡೆ ಪತ್ರ ನೀಡಬೇಕು ಎಂದು ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀವಿಕ ಸಂಘಟನೆಯ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಸಂಚಾಲಕಿ ರತ್ನಮ್ಮ, ‘ಸರ್ಕಾರ ಕೈದಿಗಳಿಗೂ ಬಿಡುಗಡೆ ಭಾಗ್ಯ ಕಲ್ಪಿಸುತ್ತದೆ. ಆದರೆ ಯಾವುದೇ ಅಪರಾಧ ಮಾಡದಿದ್ದರೂ ಬಡತನದ ಕಾರಣಕ್ಕೆ ಜೀತ ಮಾಡುತ್ತಾ ಹೀನ ಸ್ಥಿತಿಯಲ್ಲಿರುವ ಅಸಹಾಯಕರಿಗೆ ಬಿಡುಗಡೆ ಭಾಗ್ಯ ನೀಡಿ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ 2017 ರಿಂದ 2019ರ ಅವಧಿಯಲ್ಲಿ ಗುರುತಿಸಿದ ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಬೇಕು. ಜೀತ ವಿಮುಕ್ತರು ಮತ್ತು ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗುವಂತೆ ಕ್ರಮಕೈಗೊಳ್ಳಬೇಕು. ಬಿಡುಗಡೆಗೊಂಡ ಜೀತ ವಿಮುಕ್ತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ಜೀವಿಕ ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ ಸಾಲ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಂಡಿಕಲ್ಲು ಹೋಬಳಿಯ ಅರೂರು ಗ್ರಾಮದ ಸರ್ವೆ ನಂ 206 ಮತ್ತು 262 ರಲ್ಲಿ ಇರುವ 28 ಎಕರೆ ಜಮೀನಿನಲ್ಲಿ ಕಳೆದ 20 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 13 ಮಂದಿ ಜೀತದಾಳುಗಳಿಗೆ ಹಕ್ಕುಪತ್ರ ನೀಡಬೇಕು. ಅಸಂಘಟಿತ ವಲಯದ ಕಾರ್ಮಿಕರನ್ನು ಕಾರ್ಮಿಕರ ಇಲಾಖೆಯಲ್ಲಿ ನೋಂದಾಯಿಸಿ ಗುರುತಿನ ಚೀಟಿ ನೀಡುವ ಜತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಜೀತ ವಿಮುಕ್ತ ಕುಟುಂಬಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕನಿಷ್ಠ 5 ಎಕರೆ ಜಮೀನು ನೀಡಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಯೋಜನೆಯಡಿ ಆರ್ಥಿಕ ಸಹಾಯ ಒದಗಿಸಬೇಕು. ಜೀತ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಅವರು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಜೀತದಾಳುಗಳು ಮತ್ತು ಜೀತ ವಿಮುಕ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಸಂಚಾಲಕ ವಿ.ಗೋಪಾಲ್, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಓಬಳೇಶಪ್ಪ, ಗೌರವಾಧ್ಯಕ್ಷ ಬಿ.ಎಂ.ಗಂಗಾಧರಪ್ಪ, ನಂದಿ ಹೋಬಳಿ ಸಂಚಾಲಕ ಮಧು, ಮುಖಂಡ ದ್ಯಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.