
ಚಿಂತಾಮಣಿ: ತಾಲ್ಲೂಕಿನ ಕೈವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಬೆಳಗ್ಗೆ 5 ಗಂಟೆಯಿಂದ 8.30ರವರೆಗೆ ದಟ್ಟ ಮಂಜು ಆವರಿಸಿತ್ತು.
ದಟ್ಟ ಇಬ್ಬನಿಯಿಂದಾಗಿ ಅಕ್ಕಪಕ್ಕದಲ್ಲಿದ್ದ ವಸ್ತುಗಳ ಗೋಚರವಾಗಲಿಲ್ಲ. ಇದರಿಂದಾಗಿ ಕೈವಾರದಲ್ಲಿ ವಾಹನಗಳಲ್ಲಿ ಚಲಿಸುವವರು ಕೆಲಹೊತ್ತು ಪರದಾಡುವಂತಾಯಿತು. ಮೈಕೊರೆಯುವ ಚಳಿಯಿಂದಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಕಳೆದ ಒಂದು ವಾರದಿಂದ ಮತ್ತೆ ಚಳಿ ಹೆಚ್ಚಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಸೂರ್ಯ ಉದಯಿಸುವವರೆಗೆ ಬೆಚ್ಚನೆಯ ಕಂಬಳಿ ಹೊದ್ದು ಮಲಗಬೇಕು ಎನ್ನಿಸುತ್ತಿದೆ.
ಸಾಮಾನ್ಯವಾಗಿ ಸಂಕ್ರಾಂತಿ ಮತ್ತು ರಥಸಪ್ತಮಿ ಬಳಿಕ ಚಳಿ ಕಡಿಮೆಯಾಗುತ್ತದೆ. ಆದರೆ, ಸಂಕ್ರಾಂತಿ ಮತ್ತು ರಥಸಪ್ತಮಿ ಮುಗಿದು ಶಿವರಾತ್ರಿ ಹತ್ತಿರವಾಗುತ್ತಿದ್ದರೂ, ಮಂಜು ಆವರಿಸುವುದು ಮತ್ತು ಚಳಿಯ ವಾತಾವರಣ ಮಾತ್ರ ಕಡಿಮೆಯಾಗಿಲ್ಲ. ಸೂರ್ಯನ ಕಿರಣಗಳು ಭೂಮಿಗೆ ತಾಗದಂತೆ ಮಂಜು ತಡೆಯೊಡ್ಡಿದಂತೆ ಭಾಸವಾಗುತ್ತಿದೆ.
ಭಾರಿ ಚಳಿಯಿಂದಾಗಿ ಮಕ್ಕಳು ಬೆಚ್ಚನೆಯ ಹಾಸಿಗೆಯಿಂದ ಎದ್ದು ಶಾಲಾ ಮತ್ತು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಶೀತ ಗಾಳಿ ಹೆಚ್ಚಾಗಿದ್ದು, ಮಕ್ಕಳು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಮಕ್ಕಳು ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು, ತಲೆ ನೋವಿಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಮಕ್ಕಳು ವಯಸ್ಸಾದವರು ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿ ಆಹಾರ ಸೇವನೆ ಮಾಡಬೇಕು. ಅನಗತ್ಯವಾಗಿ ತಿರುಗಾಡದೆ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮದುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಹೊರಗೆ ವಾಯುವಿಹಾರಕ್ಕೆ ತೆರಳದೆ ಯೋಗ ಮತ್ತು ಲಘು ವ್ಯಾಯಾಮ ಮಾಡಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ.
ವಾಹನಗಳ ಸಂಚಾರ ವಿರಳ
ಶಾಲಾ ಮಕ್ಕಳು ಬೆಳಗ್ಗೆ ಸಂಜೆ ವಾಯುವಿಹಾರಕ್ಕೆ ಹೋಗುವವರು ಸ್ವೆಟರ್ ಮತ್ತು ತಲೆಗೆ ಟೋಪಿ ಹಾಕಿಕೊಂಡು ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರ ವಿರಳವಾಗಿವೆ. ಚಳಿ ಹೆಚ್ಚಾಗಿರುವುದರಿಂದ ಜನರು ಉಲನ್ ಸ್ವೆಟರ್ ಟೋಪಿ ಜರ್ಕಿನ್ ಧರಿಸಿಕೊಂಡು ಓಡಾಡುತ್ತಿದ್ದಾರೆ. ರಾತ್ರಿ ವೇಳೆ ಕಾರ್ಮಿಕರು ತ್ಯಾಜ್ಯ ವಸ್ತುಗಳನ್ನು ಉರಿಸಿ ರಸ್ತೆ ಬದಿಯಲ್ಲಿ ಬೆಂಕಿ ಕಾಯಿಸುವ ದೃಶ್ಯ ಕಂಡುಬರುತ್ತಿದೆ. ಜನನಿಬಿಡ ಮಾರುಕಟ್ಟೆಗಳಲ್ಲಿ ಬೆಳಗಿನ ಸಮಯ ಗ್ರಾಹಕರಿಲ್ಲದೆ ಬಿಕೊ ಎನ್ನುತ್ತಿವೆ. ಹೂವು ಹಣ್ಣು ತರಕಾರಿ ವ್ಯಾಪಾರಿಗಳು ಗ್ರಾಹಕರು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ವಾಯು ವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.