ADVERTISEMENT

ಪಕ್ಷ ಸಂಘಟನೆ ಇಂದಿನ ಅಗತ್ಯ

ಕಾಂಗ್ರೆಸ್‌ ಮುಖಂಡರಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 11:03 IST
Last Updated 20 ಆಗಸ್ಟ್ 2019, 11:03 IST
ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ವಿತರಿಸಲಾಯಿತು.
ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್‌ ಮುಖಂಡರು ಮಂಗಳವಾರ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ವಿತರಿಸಿದರು, ನಂತರ ಕಂದವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ‘ರಾಜೀವ್ ಗಾಂಧಿ ಅವರು 40ನೇ ವಯಸ್ಸಿಗೆ ಭಾರತದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿ ಹೆಗ್ಗಳಿಕೆಗೆ ಪಾತ್ರರಾದರು. ರಾಷ್ಟ್ರದ ಯುವ ಪೀಳಿಗೆಯ ಪರಿವರ್ತನೆಯ ನಿಟ್ಟಿನಲ್ಲಿ ಅವರ ಕೊಡುಗೆ ದೊಡ್ಡದು. ದೇಶದಲ್ಲಿ ಈಗ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿದಿದೆ ಎಂದರೆ ಅದಕ್ಕೆ ರಾಜೀವ್ ಗಾಂಧಿ ಅವರ ದೂರದೃಷ್ಟಿಯೇ ಕಾರಣ’ ಎಂದು ಹೇಳಿದರು.

‘ಪ್ರಧಾನಿಯಾಗಿದ್ದ, ತಾಯಿ ಇಂದಿರಾಗಾಂಧಿ ಅವರ ಹತ್ಯೆಯ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ 401 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದರು. ಇವತ್ತು ಕಾಂಗ್ರೆಸ್‌ ದೇಶದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದೆ. ಅದನ್ನು ಮತ್ತೆ ಹಿಂದಿನ ಗತವೈಭವಕ್ಕೆ ಮರಳಿ ತರಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ, ‘ಪಕ್ಷಾತೀತ ನಾಯಕರಾಗಿದ್ದ ದೇವರಾಜ ಅರಸು ಅವರು ವಿಶಾಲ ಹೃದಯಿಗಳಾಗಿ ಬಡವರು, ಹಿಂದುಳಿದವರು ಮತ್ತು ದೀನದಲಿತರ ಪರ ಧ್ವನಿ ಎತ್ತುವ ನಾಯಕರಾಗಿದ್ದರು. ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ, ಜೀತ ವಿಮುಕ್ತಿ ಮತ್ತು ಪಿಟಿಸಿಎಲ್‌ನಂತಹ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದು ಬಡವರ ಏಳಿಗೆಗೆ ಶ್ರಮಿಸಿದರು’ ಎಂದರು.

‘ತಮ್ಮ ಆಡಳಿತದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಯ ಫಲ ನೇರವಾಗಿ ಜನ ಸಾಮಾನ್ಯರಿಗೆ ಸಿಗಬೇಕು ಎಂದು ಬಯಸುತ್ತಿದ್ದರು. ಜನತೆಯ ಕಷ್ಟಗಳನ್ನು ಪರಿಹರಿಸಲು ಅಧಿಕಾರಿಗಳನ್ನು ನೇರವಾಗಿ ಜನರ ಬಳಿಗೆ ಕಳುಹಿಸಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು’ ಎಂದು ಹೇಳಿದರು.

ಮಾಜಿ ಶಾಸಕ ಶಿವಾನಂದ, ಮುಖಂಡ ಯಲುವಳ್ಳಿ ರಮೇಶ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ರಫೀವುಲ್ಲಾ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ಮುಖಂಡರಾದ ಅಮಾನುಲ್ಲಾ, ಜಯರಾಂ, ಎನ್.ನಾರಾಯಣಸ್ವಾಮಿ, ಸುರೇಶ್, ರಾಜಶೇಖರ್, ಶೆಟ್ಟಿಗೆರೆ ಮುರಳಿ,ಎಲ್.ಮಂಜುನಾಥ್, ಸಂದೀಪ್ ಚಕ್ರವರ್ತಿ, ಸುಮಿತ್ರಾ, ಬಾಬಾಜಾನ್, ಮುನೀಂದ್ರ, ಶಾಹಿದ್, ಪಿ.ಎಂ.ಕೃಷ್ಣ, ಲಕ್ಷಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.