ಶಿಡ್ಲಘಟ್ಟ: ಕಂದಾಯ ಶುಲ್ಕವನ್ನು ಕಟ್ಟಿಸಿಕೊಂಡು ಬ್ಯಾಂಕ್‌ಗೆ ಜಮೆ ಮಾಡದ ಕರ ವಸೂಲಿಗಾರನ ವಿರುದ್ಧ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲು ನಿರ್ಧರಿಸಿ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಂಡರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ದೇವರಾಜ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
ಮನೆ, ನಿವೇಶನ, ಕುಡಿಯುವ ನೀರು, ಬೀದಿ ದೀಪಗಳ ಬಾಬತ್ತು ಸುಮಾರು ₹3 ಲಕ್ಷ ಕಂದಾಯ ಶುಲ್ಕವನ್ನು ಸಕಾಲಕ್ಕೆ ಬ್ಯಾಂಕ್‌ಗೆ ಜಮೆ ಮಾಡಿಲ್ಲ. ಈ ಬಗ್ಗೆ ಮೂರು ಬಾರಿ ನೊಟೀಸ್ ನೀಡಿದ್ದರೂ ಇದುವರೆಗೂ ಉತ್ತರ ನೀಡಿಲ್ಲ ಎಂದು ಪಿಡಿಒ ಸುಧಾಮಣಿ ಸಭೆಯಲ್ಲಿ ತಿಳಿಸಿದರು.
ಕಳೆದ ಸಭೆಯಲ್ಲಿ ಮೇ ಅಂತ್ಯದೊಳಗೆ ಹಣ ಜಮೆ ಮಾಡುವುದಾಗಿ ಕರ ವಸೂಲಿಗಾರ ದ್ಯಾವಪ್ಪ ಒಪ್ಪಿಕೊಂಡಿದ್ದರು. ಆದರೆ ಇದುವರೆಗೂ ಹಣ ಜಮೆ ಮಾಡಿಲ್ಲ. ನೊಟೀಸ್‌ಗಳಿಗೆ ಉತ್ತರವೂ ಕೊಟ್ಟಿಲ್ಲ. ಈ ದಿನ ನಡೆದ ಸಭೆಗೆ ಹಾಜರಿಯೂ ಆಗಿಲ್ಲ. ಹಾಗಾಗಿ ದ್ಯಾವಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಒ ಅವರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಹಿಂದೆ ಪ್ರಭಾರ ಪಿಡಿಒ ಆಗಿದ್ದ ಗೋಪಾಲ್ ಅವರು ಒಂದು ಬೀರುವಿನ ಬೀಗದ ಕೀ ನೀಡಿಲ್ಲ. ಅದರಲ್ಲಿ ಕೆಲ ದಾಖಲೆ, ಕಡತಗಳು ಇದ್ದು ಆಡಳಿತ ನಿರ್ವಹಿಸಲು ಅಡೆ ತಡೆ ಆಗುತ್ತಿದೆ. ಕೆಲವು ಮಾಹಿತಿ ಕೋರಿ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದ್ದು ಮಾಹಿತಿ ನೀಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಪಿಡಿಒ ಸಭೆಗೆ ಮಾಹಿತಿ ನೀಡಿದರು.
ನಾನು ಪಿಡಿಒ ಆಗಿ ಅಧಿಕಾರವಹಿಸಿಕೊಂಡು ಎಂಟತ್ತು ತಿಂಗಳು ಆಯಿತು. ಆಗ ನನಗೆ ಅಧಿಕಾರ ವಹಿಸಿಕೊಟ್ಟರಾದರೂ ಒಂದು ಬೀರುವಿನ ಬೀಗದ ಕೀ ನೀಡಿಲ್ಲ. ಬಶೆಟ್ಟಹಳ್ಳಿ, ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳ ಪ್ರಭಾರ ಪಿಡಿಒ ಆಗಿ ಗೋಪಾಲ್ ಸಧ್ಯ ಕಾರ್ಯನಿರ್ವಹಿಸುತ್ತಿದ್ದು ಕೆಲಸದ ಒತ್ತಡದಿಂದ ಬರಲಾಗುತ್ತಿಲ್ಲ, ಇಂದು ಕೊಡುತ್ತೇನೆ ಅಂದು ಕೊಡುತ್ತೇನೆ ಎಂದು ಸಮಯ ದೂಡುತ್ತಿದ್ದಾರೆ ಎಂದು ಅವಲತ್ತುಕೊಂಡರು.
15ನೇ ಹಣಕಾಸು ಯೋಜನೆಯಡಿ ಬಿಡುಗಡೆ ಆಗಲಿರುವ ಅನುದಾನಕ್ಕೆ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಕಚೇರಿಯ ನವೀಕರಣ, ಕಾಂಪೌಂಡ್ ನಿರ್ಮಾಣ, ಮಿನಿ ಉದ್ಯಾನ ನಿರ್ಮಾಣ ಸೇರಿದಂತೆ ಗ್ರಾಮ ಪಂಚಾಯಿತಿ ಕಟ್ಟಡವನ್ನು ಇನ್ನಷ್ಟು ಸುಂದರಗೊಳಿಸಲು ₹10 ಲಕ್ಷ ಮೀಸಲಿಡಲು ಸದಸ್ಯರು ಒಮ್ಮತ ಸೂಚಿಸಿದರು.
ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಪರೇಟರ್, ಬೀದಿ ದೀಪಗಳನ್ನು ಅಳವಡಿಸುವವರಿಗೆ ವೇತನ ಹೆಚ್ಚಿಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕುಡಿಯುವ ನೀರಿನ ಮೋಟಾರ್ ಪಂಪ್‌ಸೆಟ್ ರಿಪೇರಿ, ನಿರ್ವಹಣೆಗೆ ವಾರ್ಷಿಕ ಸುಮಾರು ₹6 ಲಕ್ಷ, ಚರಂಡಿ ಸ್ವಚ್ಛತೆಗೆ ₹6 ಲಕ್ಷ ಮೀಸಲಿಡಲು ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.