
ಬಾಗೇಪಲ್ಲಿ: ವಿನಾಶದ ಅಂಚಿನಲ್ಲಿದ್ದ ತಾಲ್ಲೂಕಿನ ದೇವರೆಡ್ಡಿಪಲ್ಲಿ ಕೆರೆಯು ಇದೀಗ ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ಕ್ರಿ.ಶ. 1898ರಲ್ಲಿ ನಿರ್ಮಿಸಲಾದ ಕಸಬಾ ಹೋಬಳಿಯ ದೇವರೆಡ್ಡಿಪಲ್ಲಿ ಗ್ರಾಮದ ಕೆರೆಗೆ 127 ವರ್ಷಗಳ ಇತಿಹಾಸವಿದೆ. ಅನೇಕ ವರ್ಷಗಳಿಂದ ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿರಲಿಲ್ಲ. ಇದರಿಂದಾಗಿ ದೇವರೆಡ್ಡಿಪಲ್ಲಿ ಕೆರೆಯು ವಿನಾಶದ ಅಂಚಿಗೆ ತಲುಪಿದ್ದು, ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು.
ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕು. 7 ಕಿ.ಮೀ ಉದ್ದದ ಕಾಲುವೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದ್ದಲ್ಲಿ, 180 ಹೆಕ್ಟೇರ್ ಕೃಷಿ ಭೂಮಿಗೆ ನೀರು ಲಭಿಸಲಿದೆ. ಈ ಕೆರೆಯ ಅಭಿವೃದ್ಧಿಯಿಂದ ಅಂತರ್ಜಲದ ಮಟ್ಟವೂ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೂ ಗ್ರಾಮಸ್ಥರು ಮನವಿ ಮಾಡಿದ್ದರು. ಕೆರೆ ಅಭಿವೃದ್ಧಿಗಾಗಿ ₹3.6 ಕೋಟಿ ಬಿಡುಗಡೆ ಮಾಡಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರು.
ಇದರಂತೆ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿಗೆ ಹಣವೂ ಬಿಡುಗಡೆಯಾಯಿತು. ಇದೀಗ ಕಾಮಗಾರಿ ಮುಗಿದು ಒಂದು ವರ್ಷವಾಗುತ್ತಿದ್ದಂತೆ ಕೆರೆಯು ಭರ್ತಿಯಾಗಿ, ಕೋಡಿ ಹರಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಗುಡಿಬಂಡೆ, ಸೇರಿದಂತೆ ಇತರ ತಾಲ್ಲೂಕುಗಳಲ್ಲಿ ಸತತವಾಗಿ ಮಳೆ ಆಗಿರುವುದರಿಂದ ದೇವರೆಡ್ಡಿಪಲ್ಲಿ ಕೆರೆಗೆ ನೀರು ಹರಿದಿದೆ. ಕೆರೆಯಲ್ಲಿ ನೀರು ಸಂಗ್ರಹ ಆಗಿದೆ.
ಇದರೊಂದಿಗೆ ವಿನಾಶದ ಅಂಚಿನಲ್ಲಿದ್ದ ಕೆರೆಯೊಂದು ಮತ್ತೆ ಭರ್ತಿಯಾಗಿದೆ. ಅಲ್ಲದೆ, ಇದರೊಂದಿಗೆ ದಶಕಗಳ ಕನಸು ನನಸಾಗಿರುವುದು ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.
ಗುಡಿಬಂಡೆ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದ ಬಳಿಯ ಕುಶಾವತಿ ನದಿಯಿಂದ ನೀರು ಕೋರೇನಹಳ್ಳಿ, ಹಳೇಹರ್ರಹಳ್ಳಿ ಕೆರೆ ಕಾಲುವೆಗಳ ಮೂಲಕ ದೇವರೆಡ್ಡಿಪಲ್ಲಿ, ಮಂಗಸಂದ್ರ, ಪರಗೋಡು ಕೆರೆಗಳಿಗೆ ನೀರು ಹರಿಯಲಿದೆ. ಪರಗೋಡು, ವಡ್ರಪಾಳ್ಯ, ಹೊಸಕೋಟೆ ಗ್ರಾಮಗಳ ರೈತರ ಕೃಷಿ, ಕುಡಿಯುವ ನೀರಿಗೆ ಆಸರೆ ಆಗಿದೆ. ದೇವರೆಡ್ಡಿಪಲ್ಲಿ ಕೆರೆಯ ಪೋಷಕ ಕಾಲುವೆ ಅಭಿವೃದ್ಧಿಯಿಂದ 3 ಕೆರೆಗಳಿಗೆ ತುಂಬಿಸಬಹುದು. ಕೆರೆಗಳು ತುಂಬಿದರೆ ಚಿತ್ರಾವತಿ ನದಿಯ ಮೂಲಕ ಜಿಲಕರಪಲ್ಲಿ, ತೀಮಾಕಲಪಲ್ಲಿ, ಸತ್ಯಸಾಯಿ ನಗರ ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಸಲು ನೆರವಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕಾಲುವೆ, ಪೋಷಕ ಕಾಲುವೆಗಳೇ ಕೆರೆಗಳಿಗೆ ಜೀವಾಳ. ಕಾಲುವೆ, ಪೋಷಕ ಕಾಲುವೆಗಳು ಸೂಕ್ತ ರೀತಿಯ ನಿರ್ವಹಣೆಯಿಂದ ಮಾತ್ರ ಕೆರೆಗಳಿಗೆ ನೀರು ಹರಿದುಬರಲಿದೆ ಎಂಬುದಕ್ಕೆ ದೇವರೆಡ್ಡಿಪಲ್ಲಿ ಕೆರೆ ಜ್ವಲಂತ ಸಾಕ್ಷಿಯಾಗಿದೆ.
ದೇವರೆಡ್ಡಿಪಲ್ಲಿ ಕೆರೆಯಲ್ಲಿ ನೀರು ಸಂಗ್ರಹದೊಂದಿಗೆ ದಶಕಗಳ ಕನಸು ನನಸಾದಂತೆ ಆಗಿದೆ. ಕೆರೆಯಲ್ಲಿನ ನೀರು ತೆರೆದ ಹಾಗೂ ಕೊಳವೆಬಾವಿಗಳಿಗೆ ಹರಿಯಲಿದೆ. ಕೃಷಿ ಮತ್ತು ಕುಡಿಯುವ ನೀರಿನ ಹಾಹಾಕಾರವನ್ನು ನೀಗಿಸಲಿದೆಡಿ.ಎನ್. ಸುಧಾಕರರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ದೇವರೆಡ್ಡಿಪಲ್ಲಿ
ಕೆರೆಯ ಕಾಮಗಾರಿಯಿಂದ ಶಾಶ್ವತವಾಗಿ ನೀರು ಸಿಗಲಿದೆ. ಕೆರೆಗಳೇ ನೀರಿನ ಸಂಗ್ರಹದ ಮೂಲಗಳು . ಕೆರೆಗಳಿಗೆ ನೀರು ಹರಿಯಲು ಮುಖ್ಯವಾಗಿ ಕಾಲುವೆಗಳು ಮತ್ತು ಪೋಷಕ ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕುಸಿ.ಶಿವಪ್ಪ ದೇವರೆಡ್ಡಿಪಲ್ಲಿ ಗ್ರಾಮಸ್ಥ
ಮತ್ತಷ್ಟು ಕೆರೆಗಳ ಅಭಿವೃದ್ಧಿಗೆ ಕ್ರಮ ನದಿ ನಾಲೆಗಳು ಮತ್ತು ಇಲ್ಲದ ತಾಲ್ಲೂಕಿನಲ್ಲಿ ಕೆರೆಗಳೇ ನೀರಿನ ಮೂಲಧಾರವಾಗಿವೆ. ಹೀಗಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗುವುದು. ₹3.6 ಕೋಟಿ ವೆಚ್ಚದಲ್ಲಿ ಕೆರೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕೆರೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಯ ಕಾಮಗಾರಿ ಮುಗಿದ ಮೊದಲ ವರ್ಷವೇ ಕೆರೆ ತುಂಬಿರುವುದು ಸಂತಸ ತಂದಿದೆ.ಎಸ್.ಎನ್. ಸುಬ್ಬಾರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.