ADVERTISEMENT

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ

ದೇವಸ್ಥಾನದಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಕ್ಕಳ ವಿಜ್ಞಾನ ಹಬ್ಬ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 14:12 IST
Last Updated 10 ಡಿಸೆಂಬರ್ 2019, 14:12 IST
‘ಮಕ್ಕಳ ವಿಜ್ಞಾನ ಹಬ್ಬ’ದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
‘ಮಕ್ಕಳ ವಿಜ್ಞಾನ ಹಬ್ಬ’ದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.   

ಚಿಕ್ಕಬಳ್ಳಾಪುರ: ‘ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸುವ ಜತೆಗೆ ಸಂಶೋಧನಾ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ದಿನಗಳಲ್ಲಿ ಅಗತ್ಯ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ ತಿಳಿಸಿದರು.

ತಾಲ್ಲೂಕಿನ ದೇವಸ್ಥಾನದಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ‘ಮಕ್ಕಳ ವಿಜ್ಞಾನ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಅವಿಷ್ಕಾರ ಯೋಜನೆಯ ಅಡಿಯಲ್ಲಿ ಮಕ್ಕಳಲ್ಲಿ ಸ್ವ ಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಜತೆಗೆ ತಾರ್ಕಿಕ ಸಂಶೋಧನಾ ಪ್ರವೃತ್ತಿ ಬೆಳೆಸುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಸ್ವಪ್ರೇರಣೆಯಿಂದ ಪಾಲ್ಗೊಳ್ಳುವಂತಹ ವಾತಾವರಣ ಉಂಟು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ಮಗು ಬಾಲ್ಯವನ್ನು ಸಂಭ್ರಮಿಸಬೇಕಾದರೆ ಕಲಿಕೆಯಲ್ಲಿ ಹಬ್ಬದ ಸಂಭ್ರಮವಿರಬೇಕು’ ಎಂದು ಹೇಳಿದರು.

ADVERTISEMENT

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಾತನಾಡಿ, ‘ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವಲ್ಲಿ ಈ ಕಾರ್ಯಕ್ರಮ ಪೂರಕವಾಗಿದೆ. ಭಾಷೆ, ವಿಜ್ಞಾನ, ಗಣಿತ, ನಾಟಕ ಹಾಗೂ ನೃತ್ಯ ಒಳಗೊಂಡ ಕಲಿಯುವ ಕ್ರಮ ಅನ್ವೇಷಿಸುವ ಈ ಪ್ರಕ್ರಿಯೆ ಮಕ್ಕಳಲ್ಲಿ ಜ್ಞಾನದ ಜತೆಗೆ ಮನೋವಿಕಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ’ ಎಂದರು.

ಮುಖ್ಯ ಶಿಕ್ಷಕ ಶಾಂತಮೂರ್ತಿ ಮಾತನಾಡಿ, ‘ಸೌರವ್ಯೂಹಕ್ಕೆ ಸಂಬಂಧಿಸಿದಂತೆ ‘ಚುಕ್ಕಿ-ಚಂದ್ರಮ’, ಅನ್ವೇಷಣೆ ಕುರಿತಾದ ‘ಮಾಡಿ ಆಡು’, ಭಾಷಾ ಜ್ಞಾನ ಬೆಳೆಸುವ ‘ಆಡು -ಹಾಡು’ ಮತ್ತು ಸುತ್ತಮುತ್ತಲಿನ ಸಾಮಾಜಿಕ ಅಧ್ಯಯನಕ್ಕೆ ಪೂರಕವಾಗಿ ‘ಊರು ತಿಳಿಯೋಣ’ ಹೀಗೆ ನಾಲ್ಕು ವಿಭಾಗಗಳಲ್ಲಿ ವಿಜ್ಞಾನ ಹಬ್ಬ ನಡೆಯುತ್ತದೆ. ಸರ್ಕಾರಿ ಶಾಲೆಯೆಡೆಗೆ ಜನರಲ್ಲಿ ಪ್ರೀತಿ ಬೆಳೆಸುವ ಉದ್ದೇಶದಿಂದ ಸಮುದಾಯದ ಸಕ್ರಿಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಮರಸನಹಳ್ಳಿ ಕ್ಲಸ್ಟರ್‌ನ ದೇವಸ್ಥಾನದ ಹೊಸಹಳ್ಳಿ, ಗೂವ್ವಲಕಾನಹಳ್ಳಿ, ಇನಮಿಂಚೇನಹಳ್ಳಿ ಮರಸನಹಳ್ಳಿ ಹಾಗೂ ಗುಂತಪ್ಪನಹಳ್ಳಿ ಹೂನೇಗಲ್ ಶಾಲೆಗಳ ಮಕ್ಕಳು ವಿಜ್ಞಾನ ಹಬ್ಬದಲ್ಲಿ ಭಾಗವಹಿಸಿದ್ದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಡಿ.ಕೆ.ಮುನಿರಾಜು, ಮುಖಂಡರಾದ ರಾಮಣ್ಣ, ಸಂತೋಷ್, ಸೀನಪ್ಪ, ದೇವರಾಜಪ್ಪ, ನಂದಿ ಸಿಆರ್‌ಪಿ ಅಂಬರೀಶ್, ರಾಜೇಶ್, ಮಕ್ಕಳ ವಿಜ್ಞಾನ ಹಬ್ಬದ ನೋಡಲ್ ಅಧಿಕಾರಿ ನೇತ್ರಾವತಿ, ಶಿಕ್ಷಕರಾದ ಪ್ರಕಾಶ್, ಹನುಮಂತರೆಡ್ಡಿ, ಮಂಜುಳಾ ಗೋಪಾಲಾಚಾರ್, ಇನಮಿಂಚೇನಹಳ್ಳಿ ಶಾಲೆ ಸಹ ಶಿಕ್ಷಕರಾದ ಸುಶೀಲಾ ಮಂಜುನಾಥ್, ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.