ADVERTISEMENT

ಇಂದಿನಿಂದ ಭಕ್ತರಿಗೆ ಷರತ್ತುಬದ್ಧ ‘ದರ್ಶನ’

ದೇವಾಲಯಗಳಲ್ಲಿ ತೀರ್ಥ–ಪ್ರಸಾದ ವಿತರಣೆಗೆ ನಿರ್ಬಂಧ, ಸಾಮೂಹಿಕ ಪ್ರಾರ್ಥನೆಗೆ ನಿಷಿದ್ಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 13:26 IST
Last Updated 7 ಜೂನ್ 2020, 13:26 IST
ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯವನ್ನು ಭಾನುವಾರ ಭಕ್ತರ ದರ್ಶನಕ್ಕೆ ಸಜ್ಜುಗೊಳಿಸಲಾಯಿತು.
ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯವನ್ನು ಭಾನುವಾರ ಭಕ್ತರ ದರ್ಶನಕ್ಕೆ ಸಜ್ಜುಗೊಳಿಸಲಾಯಿತು.   

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಸೋಮವಾರದಿಂದ (ಜೂನ್‌ 8) ‘ಅನ್‌ಲಾಕ್‌ 1.0’ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳು ಇಂದು ಬಾಗಿಲು ತೆರೆಯಲಿವೆ.

ಜತೆಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಗ್ರಾಹಕರ ಹಿತದೃಷ್ಟಿಯಿಂದ ನಿಗದಿಪಡಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಸರ್ಕಾರ ದೇವಾಲಯ ತೆರೆಯಲು ಅನುಮತಿ ನೀಡಿದ್ದೇ, ಜಿಲ್ಲೆಯಲ್ಲಿ ಭಾನುವಾರ ದೇವಾಲಯಗಳನ್ನು ಶುಚಿಗೊಳಿಸಿ, ಭಕ್ತರ ದರ್ಶನಕ್ಕೆ ಅಣಿಗೊಳಿಸುವ ಕಾರ್ಯಗಳು ಬಹುತೇಕ ದೇವಾಲಯಗಳಲ್ಲಿ ಜೋರಾಗಿ ನಡೆದಿದ್ದು ಗೋಚರಿಸಿತು.

ADVERTISEMENT

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ಮಾತ್ರ ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು, ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ, ಜಾತ್ರೆ ಮುಂತಾದ ವಿಶೇಷ ಧಾರ್ಮಿಕ ಕೈಂಕರ್ಯಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಿದೆ.

ಹೋಟೆಲ್‌ ಮತ್ತು ದೇವಾಲಯಗಳಲ್ಲಿ ಕಡ್ಡಾಯವಾಗಿ ವ್ಯಕ್ತಿಗತ ಅಂತರ (6 ಅಡಿ) ಕಾಪಾಡಬೇಕು, ಮಾಸ್ಕ್‌ ಧರಿಸಬೇಕು. ಎಲ್ಲ ಸ್ಥಳಗಳ ಪ್ರವೇಶದ್ವಾರದಲ್ಲಿ ಸ‍್ಯಾನಿಟೈಸರ್‌ ಇಡಬೇಕು. ಥರ್ಮಲ್‌ ಸ್ಕ್ಯಾನರ್‌ ಮೂಲಕ ತಪಾಸಣೆ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಇನ್ನೊಂದೆಡೆ, ಜಿಲ್ಲಾಡಳಿತ ಭಕ್ತರಿಗೂ ಷರತ್ತುಗಳನ್ನು ವಿಧಿಸಿದ್ದು, ದೇವಾಲಯ, ಚರ್ಚ್‌, ಮಸೀದಿಗಳಲ್ಲಿ ಪವಿತ್ರ ಜಲ ಪ್ರೋಕ್ಷಣೆ ಮಾಡುವುದು ನಿಷೇಧಿಸಿದೆ. ಜತೆಗೆ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕಿ, ಧಾರ್ಮಿಕ ಗ್ರಂಥ , ಪುಸ್ತಕ ಮುಂತಾದವುಗಳನ್ನು ಮುಟ್ಟುವುದು ಮತ್ತು ಮುತ್ತಿಡುವುದನ್ನು ನಿರ್ಬಂಧಿಸಿದೆ.

ಪೂಜೆಗೆ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ಯಾನಿಟೈಸೇಶನ್‌ ಮಾಡಬೇಕು. ಚರ್ಚ್‌ನಿಂದ ಹೊರಗೆಯೂ ಅಭಿನಂದಿಸಲು ಮತ್ತು ಇತರ ಕಾರಣಗಳಿಗೆ ಹಸ್ತ ಲಾಘವ ಮಾಡುವುದು ಅಥವಾ ತಬ್ಬಿಕೊಳ್ಳುವುದನ್ನು ನಿಷೇಧಿಸಿದೆ. 65 ವಯಸ್ಸಿನ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.

ಭಕ್ತಾಧಿಗಳು ಪಾದರಕ್ಷೆಗಳನ್ನು ವಾಹನಗಳಲ್ಲಿ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಬಿಟ್ಟು ದೇವಾಲಯಕ್ಕೆ ಬರುವಂತೆ ಸೂಚಿಸಲಾಗಿದೆ. ದೇವಾಲಯ, ಚರ್ಚ್‌ಗಳಲ್ಲಿ ಗುಂಪು ಹಾಡುಗಾರಿಕೆ, ಸಂಗೀತ ಕಚೇರಿಗಳಿಗೆ ಅನುಮತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.