ADVERTISEMENT

ಮತದಾರರಿಗೆ ಡಿಜಿಟಲ್ ಪೇಮೆಂಟ್‌!

ಗೌರಿಬಿದನೂರು: ಹಣ ಹಂಚಲು ಫೋನ್‌ ಪೇ, ಗೂಗಲ್ ಪೇ, ಪೇಟಿಎಂ ಬಳಕೆ

ಎ.ಎಸ್.ಜಗನ್ನಾಥ್
Published 27 ಡಿಸೆಂಬರ್ 2020, 1:54 IST
Last Updated 27 ಡಿಸೆಂಬರ್ 2020, 1:54 IST

ಗೌರಿಬಿದನೂರು: ಗ್ರಾ.ಪಂ. ಚುನಾವಣೆಯ ಅಂತಿಮ ಕ್ಷಣದ ಕಸರತ್ತುಗಳನ್ನು ನಾಯಕರು ಹಾಗೂ ಅವರ ಬೆಂಬಲಿತ ಅಭ್ಯರ್ಥಿಗಳು ಶನಿವಾರ ಭರ್ಜರಿಯಾಗಿ ಮಾಡಿದ್ದಾರೆ.

ಸ್ಥಳೀಯ ‌ರಾಜಕಾರಣದಲ್ಲಿ ಅಭ್ಯರ್ಥಿಗಳಿಗೆ ಪಕ್ಷ ನಿಷ್ಠೆಗಿಂತ ವೈಯಕ್ತಿಕ ವರ್ಚಸ್ಸು ಹಾಗೂ ಕಣದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರದ ಪ್ರತಿಷ್ಠೆ ಮುಖ್ಯವಾಗಿದೆ. ಇದಕ್ಕಾಗಿ ಅಂತಿಮ ಕ್ಷಣದಲ್ಲಿ ಸಾಕಷ್ಟು ಕಸರತ್ತು ಮಾಡುವ ಮೂಲಕ ಮತದಾರರ ಮನೆ ಬಾಗಿಲನ್ನು ಬಡಿಯುತ್ತಿದ್ದಾರೆ.

ಕೆಲವರು ಚಿಹ್ನೆಗೆ ಪೂರಕವಾದ ವಸ್ತುಗಳನ್ನು ಉಡುಗೊರೆಯಾಗಿ ಕೊಡಲು ಮುಂದಾದರೆ ಇನ್ನೂ ಕೆಲವರು ಕುಟುಂಬಕ್ಕೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಕೊಡಲು ಮುಂದಾಗಿದ್ದಾರೆ.

ADVERTISEMENT

ಇವೆಲ್ಲದಕ್ಕೂ ಮಿಗಿಲಾಗಿ ನಾಯಕರು ತಮ್ಮ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸಲು ಕುರುಡು ಕಾಂಚಾಣದ ಮೂಲಕ ಮತದಾರರ ಮನವೊಲಿಸಲು ಮುಂದಾಗಿದ್ದಾರೆ‌.

ರಾಜಕೀಯದಲ್ಲಿ ಚಾಕಚಕ್ಯತೆ ಪಡೆದಿರುವ ನಾಯಕರು ತಮ್ಮ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಚುನಾವಣೆಗೆ ಅವಶ್ಯವಿರುವ ಕಾಂಚಾಣವನ್ನು ಮೂರ್ನಾಲ್ಕು ದಿನಗಳ ಹಿಂದೆಯೇ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಅದರಲ್ಲಿ ಅರ್ಧದಷ್ಟನ್ನು ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬ್ಯಾಂಕ್ ಖಾತೆ ಇಲ್ಲದ ಮತದಾರರಿಗೆ ನೀಡಿ, ಉಳಿದ ಹಣವನ್ನು ತಮ್ಮ ಖಾತೆಯಿಂದ ನೇರವಾಗಿ ಪೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಇನ್ನಿತರ ವಿಧಾನದ ಮೂಲಕ ಅವರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಮಾದರಿ‌ ಮತ ಪತ್ರದಲ್ಲಿ ಮತದಾನದ ಮಾದರಿ ಮಾಡಿಸುವ ಮೂಲಕ ಡಿಜಿಟಲ್ ವಿಧಾನವನ್ನು ಗ್ರಾಮಾಯಣದಲ್ಲಿ ಬಳಕೆ ಮಾಡಿಕೊಂಡಿರುವುದು ಎಲ್ಲೆಡೆ ಕೇಳಿ ಬರುತ್ತಿದೆ. ಇನ್ನೂ ಕೆಲವೆಡೆಗಳಲ್ಲಿ ಟೋಕನ್ ವ್ಯವಸ್ಥೆ ಮೂಲಕ ಮತದಾರರ ಋಣ ತೀರಿಸುವ ಕಸರತ್ತು ಮಾಡಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಅರಿತಿದ್ದ ಮತದಾರರು ಅಭ್ಯರ್ಥಿಗಳು ಮತ್ತು ನಾಯಕರು ಮನೆ ಬಾಗಿಲಿಗೆ ಬರುವ ಕ್ಷಣಕ್ಕಾಗಿ ಕಾದುಕುಳಿತಿರುವುದು ಅಲ್ಲಲ್ಲಿ ಕಾಣಸಿಗುತ್ತಿತ್ತು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಬದುಕಬೇಕಾದ ಪ್ರಬುದ್ಧ ನಾಗರಿಕರಿಗೆ ಚುನಾವಣೆಯ ಸಂದರ್ಭದಲ್ಲಿ ಹಣ ಮತ್ತು ವಸ್ತುಗಳ ಆಮಿಷದ ಮೂಲಕ ದಾರಿತಪ್ಪಿಸುವ ಕಾರ್ಯವನ್ನು ನಾಯಕರು ಮಾಡುತ್ತಿದ್ದಾರೆ. ಇದನ್ನು ಕಡಿವಾಣ ಹಾಕಲು ಚುನಾವಣಾ ಆಯೋಗದ ಅಧಿಕಾರಿ ಗಳಾಗಲೀ ಅಥವಾ ಸರ್ಕಾರಕ್ಕಾಗಿ
ಸಾಧ್ಯವಾಗಿಲ್ಲ.

ಸ್ಥಳೀಯ ಮಟ್ಟದಲ್ಲಿ ಈ ಅವ್ಯವಸ್ಥೆಗೆ ಕಡಿವಾಣ ಹಾಕುವವರೆಗೂ ಗ್ರಾಮಗಳ‌ ಅಥವಾ ರಾಷ್ಟ್ರದ ಪ್ರಗತಿ ನಿರೀಕ್ಷಿಸಲು ಸಾಧ್ಯ ವಿಲ್ಲ ಎನ್ನುತ್ತಾರೆ ಪ್ರಜ್ಞಾವಂತ
ಮತದಾರರು.

ಅಭ್ಯರ್ಥಿ ಗೆದ್ದರೆ ಮನೆಗೆ ಗಿಫ್ಟ್‌: ಸ್ಥಳೀಯ ಚುನಾವಣೆಯಲ್ಲಿ ಕೆಲವು ಮುಖಂಡರು ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಅಭ್ಯರ್ಥಿಗಳು ‌ಸ್ಥಳೀಯ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಅವರ ಚುನಾವಣಾ ಅಖಾಡಕ್ಕೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ನಾಯಕರು ಮಾಡಿದ್ದಾರೆ.

ವಿಶೇಷ ವಾಗಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿನ ಮತದಾರರಿಗೆ ಉಡುಗೊರೆಗೆ ಸಂಬಂಧಿಸಿದಂತೆ ಟೋಕನ್ ನೀಡಿದ್ದು, ಮತದಾರರ ಪ್ರಾಮಾಣಿಕ ಪ್ರಯತ್ನದಿಂದ ಅಭ್ಯರ್ಥಿ ಜಯಗಳಿಸಿದಲ್ಲಿ ಉಡುಗೊರೆ ಜನರ ಮನೆ ಬಾಗಿಲಿಗೆ ತಲುಪಲಿದೆ ಎಂಬ ಮಾಹಿತಿ ಇರುವ ಟೋಕನ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್
ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.