ADVERTISEMENT

ಭಕ್ತರಹಳ್ಳಿ ಅರಸೀಕೆರೆ ಯೋಜನೆಗೆ ಗ್ರಹಣ

ಚಿಂತಾಮಣಿಗೆ ನೀರು ಸರಬರಾಜು ಉದ್ದೇಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:02 IST
Last Updated 22 ಏಪ್ರಿಲ್ 2021, 5:02 IST
ಚಿಂತಾಮಣಿಗೆ ನೀರು ಪೂರೈಸುವ ಯೋಜನೆ ರೂಪಿಸಿರುವ ಭಕ್ತರಹಳ್ಳಿ ಅರಸೀಕೆರೆ
ಚಿಂತಾಮಣಿಗೆ ನೀರು ಪೂರೈಸುವ ಯೋಜನೆ ರೂಪಿಸಿರುವ ಭಕ್ತರಹಳ್ಳಿ ಅರಸೀಕೆರೆ   

ಚಿಂತಾಮಣಿ: ನಗರದ ನಾಗರೀಕರ ನೀರಿನ ದಾಹ ತೀರಿಸಲು ₹10.95 ಕೋಟಿ ವೆಚ್ಚದಲ್ಲಿ ರೂಪಿಸಿದ್ದ ಭಕ್ತರಹಳ್ಳಿ-ಅರಸೀಕೆರೆ ಯೋಜನೆಗೆ ಗರಬಡಿದಿದೆ. ಯೋಜನೆಯಿಂದ ನಮಗೂ ನೀರು ಕೊಡಬೇಕು ಎಂದು ಒತ್ತಾಯಿಸಿ ಕೆರೆಯ ಅಚ್ಚುಕಟ್ಟುದಾರ ಪ್ರದೇಶದ ಕೆಲವು ರೈತರು ಹೈಕೋರ್ಟ್ ಕದತಟ್ಟಿರುವುದು ಗರಬಡಿತಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರ ಚಿಂತಾಮಣಿ ಪ್ರಸ್ತುತ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದೆ. 7-8 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ನೀರು ಸರಬರಾಜಿಗೆ ಹೆಸರುವಾಸಿಯಾಗಿದ್ದ ನಗರ ಕಳೆದ 4-5 ವರ್ಷಗಳಿಂದ ಹಿಂದೆಂದೂ ಕಾಣದಂತಹ ನೀರಿನ ಬರ ಅನುಭವಿಸುತ್ತಿದೆ. ನಗರಕ್ಕೆ ನೀರು ಸರಬರಾಜು ಮಾಡಲು ರೂಪಿಸಿದ್ದ ಭಕ್ತರಹಳ್ಳಿ ಅರಸೀಕೆರೆ ಯೋಜನೆ ಕಳೆದ 7-8 ವರ್ಷಗಳಿಂದನನೆಗುದಿಗೆ ಬಿದ್ದಿದ್ದು, ಕಳೆದ ವರ್ಷ ಯೋಜನೆಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದರು.

ನಗರದ ಜನಸಂಖ್ಯೆಯು 2011ರ ಜನಗಣತಿಯಂತೆ 76,068. ನಗರಕ್ಕೆ ನೈಸರ್ಗಿಕವಾಗಿ ನೀರು ಸರಬರಾಜು ಮಾಡುತ್ತಿದ್ದ ಕನಂಪಲ್ಲಿ ಕೆರೆ ಮಳೆಯ ಕೊರತೆಯಿಂದ ಬಹುತೇಕ ವರ್ಷಗಳು ತುಂಬುವುದಿಲ್ಲ. ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿವೆ. ಪ್ರತಿನಿತ್ಯ ಲಕ್ಷಾಂತರ ರೂ ಖರ್ಚು ಮಾಡಿದರೂ ಅಲ್ಪ ನೀರು ಸರಬರಾಜು ಮಾಡಲಾಗುತ್ತಿದ್ದರೂ ಬಹುತೇಕ ವಾರ್ಡ್‌ಗಳಿಗೆ ತಲುಪುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದರು.

ADVERTISEMENT

ನೀರಿನ ಕೊರತೆಯನ್ನು ನೀಗಿಸಿಕೊಳ್ಳಲು ನಗರದಿಂದ 14 ಕಿ.ಮೀ ದೂರದಲ್ಲಿರುವ ಭಕ್ತರಹಳ್ಳಿ ಅರಸೀಕೆರೆಯ ಯೋಜನೆಯನ್ನು ರೂಪಿಸಲಾಗಿದೆ. ನೀರಿನ ಸಾಮರ್ಥ್ಯ 35.07 ಎಸಿಎಫ್‌ಟಿ ಆಗಿರುತ್ತದೆ. ಸದರಿ ಜಾರಿಯಲ್ಲಿರುವ ಎತ್ತಿನಹೊಳೆ ಯೋಜನೆಯ ಮೂಲದಿಂದ ಕೆರೆಗೆ ನೀರು ತುಂಬಿಸಲು ಗುರಿ ಹೊಂದಲಾಗಿದೆ. ಕೆರೆಯಿಂದ ನಗರಕ್ಕೆ 3.00 ಎಂಎಲ್‌ಡಿ ಹಾಗೂ ಮಾರ್ಗಮಧ್ಯದ 5 ಹಳ್ಳಿಗಳಿಗೆ 0.50 ಎಂಎಲ್‌ಡಿ ನೀರು ಸರಬರಾಜು ಮಾಡುವುದು ಯೋಜನೆಯಲ್ಲಿ ಸೇರಿದೆ.

₹16.30 ಕೋಟಿಗೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಮೇ 2016 ರಲ್ಲಿ ಸಲ್ಲಿಸಲಾಗಿತ್ತು. ಆದರೆ ಹಣದ ಕೊರತೆಯಿಂದ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಆಗಸ್ಟ್ 2018ರಲ್ಲಿ ತಿಳಿಸಲಾಗಿತ್ತು. ನಂತರ ನಗರೋತ್ಥಾನ-3ರ ಯೋಜನೆಯಡಿ ₹12.15 ಕೋಟಿ ಯೋಜನೆಯ ಅಂದಾಜುಪಟ್ಟಿಯನ್ನು ಸಲ್ಲಿಸಲಾಗಿತ್ತು. ಸರ್ಕಾರದಿಂದ ₹10.95 ಕೋಟಿ ಗಳಿಗೆ ಮೇ 2019ರಲ್ಲಿ ಯೋಜನೆಗೆ ಅನುಮೋದನೆ ನೀಡಿದೆ. ಹಣದ ಲಭ್ಯತೆ ಕಡಿಮೆಯಾದ ಕಾರಣ ಅಂದಾಜು ಪಟ್ಟಿಯಲ್ಲಿದ್ದ ಕೆರೆಯ ಆಳವನ್ನು ಹೆಚ್ಚಿಸುವ ಕಾಮಗಾರಿಯನ್ನು ಕೈಬಿಡಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ
ಅಧಿಕಾರಿಗಳು ತಿಳಿಸಿದ್ದಾರೆ.

₹7.68 ಕೋಟಿ ವೆಚ್ಚದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಮೂಲಕ ಹೈದರಾಬಾದಿನ ಅಯ್ಯಪ್ಪ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಆರಂಭವಾಗಿದೆ. ಪೂರ್ಣಗೊಳಿಸಲು 11 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಕಾಮಗಾರಿ ಆರಂಭವಾದ ಕೂಡಲೇ ಅಚ್ಚುಕಟ್ಟುದಾರರ ರೈತರು ಯೋಜನೆಯ ಬಗ್ಗೆ ತಗಾದೆ ತೆಗೆದರು. ನಗರಕ್ಕೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ. ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ನೀರು ನೀಡಬೇಕು. ನೀರು ಶುದ್ಧೀಕರಣ ಘಟಕವನ್ನು ಕೆರೆಯ ಬಳಿಯೇ ಸ್ಥಾಪಿಸಬೇಕು. ವ್ಯರ್ಥವಾಗುವ ನೀರು ಜಾನುವಾರುಗಳಿಗೆ ಹಾಗೂ ಕೃಷಿಗೆ ಅನುಕೂಲವಾಗುತ್ತದೆ ಎಂಬುದು ನಮ್ಮ ಬೇಡಿಕೆ ಎನ್ನುತ್ತಾರೆ ಹೋರಾಟಗಾರರು.

ನ್ಯಾಯಾಲಯದಲ್ಲಿ ತೀರ್ಮಾನ ಆಗುವವರೆಗೂ ಕಾಮಗಾರಿ ಆರಂಭವಾಗುವುದಿಲ್ಲ. ಯಾವುದೇ ವಿಘ್ನಗಳಿಲ್ಲದೆ ನಡೆದಿದ್ದರೆ ಕಾಮಗಾರಿ ಮುಕ್ತಾಯವಾಗುತ್ತಿತ್ತು. ಜನರ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗಾದರೂ ಪರಿಹಾರವಾಗುತ್ತಿತ್ತು. ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಮಾತುಕತೆ ನಡೆಸಬೇಕು ಅಥವಾ ನ್ಯಾಯಾಲಯದಲ್ಲಿ ಸಮರ್ಪಕವಾಗಿ ವಾದ ಮಂಡಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಆರಂಭಿಸಬೇಕು ಎಂಬುದು ನಗರದ ನಾಗರಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.