ADVERTISEMENT

ಹಣ ದುರುಪಯೋಗ ತನಿಖೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:17 IST
Last Updated 17 ಸೆಪ್ಟೆಂಬರ್ 2020, 5:17 IST

ಚಿಂತಾಮಣಿ: ಕಾಮಗಾರಿ ನಡೆಸದೆ ನಕಲಿ ಬಿಲ್ಲುಗಳನ್ನು ಮಾಡಿಕೊಂಡು ಹಣ ದುರುಪಯೋಗವಾಗಿದೆ ಎಂಬ ದೂರಿನ ಆರೋಪದ ಬಗ್ಗೆ ತನಿಖೆ ನಡೆಸಲು ಬುಧವಾರ ಬಂದಿದ್ದ ಲೋಕಾಯುಕ್ತ ಇಲಾಖೆಯ ತಾಂತ್ರಿಕ ಅಧಿಕಾರಿ ಕೆಲವರ ಪ್ರತಿಭಟನೆಯಿಂದ ತನಿಖೆ ನಡೆಸದೆ ವಾಪಸ್ ಹೋದ ಪ್ರಕರಣ ತಾಲ್ಲೂಕಿನದೊಡ್ಡ ಗಂಜೂರು ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕು ಪಂಚಾಯಿತಿಯ 2017-18 ನೇ ಸಾಲಿನ ಮುದ್ರಾಂಕ ಶುಲ್ಕ ಯೋಜನೆಯಲ್ಲಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ನೀರುಗಂಟಿಕೃಷ್ಣಪ್ಪ ಮನೆ ಹತ್ತಿರದಿಂದ ನೀರಿನ ಸಿಸ್ಟನ್‌ವರೆಗೂ ಪೈಪ್ ಲೈನ್ ಅಳವಡಿಕೆಗೆ ₹50 ಸಾವಿರ ಮತ್ತು ಗ್ರಾಮಪಂಚಾಯಿತಿ ಕಚೇರಿಯಿಂದ ಸಿಸ್ಟನ್‌ವರೆಗೂ ₹50 ಸಾವಿರ ಮಂಜೂರಾಗಿತ್ತು.

ಆದರೆ, ಕಾಮಗಾರಿ ನಡೆಸದೆ ಹಿಂದೆ ಇದ್ದ ಹಳೆಯ ಪೈಪ್ ಲೈನ್‌ಗೆ ಸಂಪರ್ಕ ಕಲ್ಪಿಸಿ ಹಣ ಲಪಟಾಯಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜೆ.ನಾರಾಯಣಸ್ವಾಮಿ ಲೋಕಾಯುಕ್ತ ಮತ್ತು ಶಾಸಕರಿಗೆ ದೂರು ನೀಡಿದ್ದರು.

ADVERTISEMENT

ಬೆಂಗಳೂರಿನ ಲೋಕಾಯುಕ್ತ ಕಚೇರಿಯ ಎಂಜನಿಯರ್ ಅಶೋಕ್ ತನಿಖೆಗೆಂದು ಗ್ರಾಮಕ್ಕೆ ಬಂದಿದ್ದರು. ಆದರೆ, ಕೆಲವರು ತನಿಖೆಗೆ ಪ್ರತಿಭಟನೆ ನಡೆಸಿದ್ದರಿಂದ ಅಧಿಕಾರಿ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.