ADVERTISEMENT

ವರ್ಷದೊಳಗೆ ಜಿಲ್ಲಾ ಗುರುಭವನ ಪೂರ್ಣ- ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್

ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:13 IST
Last Updated 6 ಸೆಪ್ಟೆಂಬರ್ 2021, 8:13 IST
ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿಸಿ ಸಿಇಒ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಇದ್ದರು
ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿಸಿ ಸಿಇಒ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಇದ್ದರು   

ಚಿಕ್ಕಬಳ್ಳಾಪುರ: ಒಂದು ವರ್ಷದ ಒಳಗೆ ಗುರುಭವನದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

‌ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದ ಗುರುಭವನ ಆಗಬೇಕು ಎನ್ನುವ ಬೇಡಿಕೆ ಇತ್ತು. ಈಗ ಶುಭಗಳಿಗೆ ಕೂಡಿ ಬಂದಿದೆ. ಜಿಲ್ಲಾಧಿಕಾರಿ ಅವರು ಪ್ರತಿಷ್ಠಿತ ಜಾಗವನ್ನು ಗುರುತಿಸಿ ನೀಡಿದ್ದಾರೆ. ಕಟ್ಟಡಕ್ಕೆ ₹ 4ರಿಂದ ₹ 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಗುಣಮಟ್ಟದ ಗುರುಭವನವನ್ನು ನಿರ್ಮಿಸೋಣ ಎಂದರು.

ADVERTISEMENT

ಶಿಕ್ಷಕರಿಗೆ ಗೌರವ ಸಲ್ಲಿಸಲು ಗುರುಭವನವನ್ನು ಸುಸಜ್ಜಿತವಾಗಿ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ₹ 2 ಕೋಟಿ, ರಾಜ್ಯ ಸರ್ಕಾರದಿಂದ ₹ 1 ಕೋಟಿ ನೀಡಲಾಗುವುದು. ಇನ್ನೂ ₹ 2 ಕೋಟಿ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆ ಬರಿ ಕಟ್ಟಡಗಳಿಂದ ಆಗುವುದಲ್ಲ. ಶಿಕ್ಷಕರೇ ಮುಖ್ಯ. ನಮ್ಮದು ಗುರುಪರಂಪರೆ. ಆ ಕಾರಣದಿಂದಲೇ ನಾವು ಗುರುಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತೇವೆ. ರಾಜ ಮಹಾರಾಜರು ಸಹ ಗುರುವನ್ನು ಅತ್ಯಂತ ಗೌರವದಿಂದ ನೋಡಿದ್ದಾರೆ ಎಂದರು.

ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡುವುದು ಶಿಕ್ಷಕರು. ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು, ಸಮ ಸಮಾಜ ನಿರ್ಮಾಣವನ್ನು ಮಾಡುವ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು. ವ್ಯಕ್ತಿ ವಿಕಾಸವಾಗುವ ಜ್ಞಾನವನ್ನು ಬಿತ್ತರಿಸಿದಾಗ ಮಾತ್ರ ಗುರುವಿನ ಸ್ಥಾನ ದೊಡ್ಡದು ಎನಿಸುತ್ತದೆ ಎಂದು ಹೇಳಿದರು.

ಕೆಲವು ವೃತ್ತಿಗಳು ವೇತನಕ್ಕೆ ಕೆಲಸ ಮಾಡುವುದಲ್ಲ. ವೈದ್ಯರು, ಶಿಕ್ಷಕರು, ಪೊಲೀಸರು ಸದಾ ಸಮಾಜಮುಖಿಯಾಗಿ ಆಲೋಚನೆ ಮಾಡುವವರಾಗಿರಬೇಕು. ಸೇವೆಯೇ ಮೊದಲ ಆದ್ಯತೆ ಆಗಿರಬೇಕು. ಸರ್ಕಾರ ನಿಗದಿಗೊಳಿಸಿರುವ ವೇತನ ದೊರೆತೇ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ನಗರದ ಹೊರವಲಯದಲ್ಲಿ ಗುರುಭವನ ಕಾಮಗಾರಿಗೆ ಸಚಿವರು ಭೂಮಿಪೂಜೆ
ನೆರವೇರಿಸಿದರು.

ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿಸಿ ಸಿಇಒ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.