ADVERTISEMENT

ಗಡಿ ಭಾಗದ ಕನ್ನಡ ಶಾಲೆ ಮುಚ್ಚಬೇಡಿ: ಸಮ್ಮೇಳನ ಅಧ್ಯಕ್ಷ ಅಮರನಾರಾಯಣ ಒತ್ತಾಸೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:07 IST
Last Updated 26 ಫೆಬ್ರುವರಿ 2021, 21:07 IST
ಕೆ.ಅಮರನಾರಾಯಣ
ಕೆ.ಅಮರನಾರಾಯಣ   

ಚಿಕ್ಕಬಳ್ಳಾಪುರ: ‘ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಅಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಸಿಗುವಂತೆ ತರಗತಿಗಳನ್ನು ನಡೆಸಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಹೆಚ್ಚು ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂಬುದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಅಮರನಾರಾಯಣ ಅವರ ಒತ್ತಾಸೆ.

‘ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಹಾಗಾಗಿ, ಎಲ್ಲೆಡೆ ಕನ್ನಡದಲ್ಲೇ ಫಲಕಗಳನ್ನು ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಆಗುತ್ತಿದೆ. ಇನ್ನೂ ಹೆಚ್ಚು ಪರಿಣಾಮಕಾರಿ ಆಗಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂಬುದೇ ನನ್ನ ಮೂಲ ಆಗ್ರಹ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕನ್ನಡ ಭವನ ಇಲ್ಲ. ಹಾಗಾಗಿ ನಿಧಾನಗತಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕೆಲಸವನ್ನು ಚುರುಕುಗೊಳಿಸಬೇಕು. ರೋಟರಿ ಸಂಸ್ಥೆ ಸಹಯೋಗದಲ್ಲಿ ‘ಕೋಟಿ ನಾಟಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾ ಕಾರಣದಿಂದ ಸದ್ಯಕ್ಕೆ ಚಟುವಟಿಕೆಗಳು ನಿಂತಿವೆ. ಮುಂದಿನ ದಿನಗಳಲ್ಲಿ ಮುಂದುವರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ತವರು ಜಿಲ್ಲೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ನನ್ನ ಕನ್ನಡಪರ ಸೇವೆ ಗುರುತಿಸಿ ಆಯ್ಕೆ ಮಾಡಿದವರನ್ನು ಅಭಿನಂದಿಸುತ್ತೇನೆ. ನಾನು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಸುಗಟೂರಿನಲ್ಲಿ ಹುಟ್ಟಿದವನು. ಹಾಗಾಗಿ ಬಾಲ್ಯದಿಂದಲ್ಲೂ ಜಿಲ್ಲೆಯೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.

‘ನಾನು ಮೂಲತಃ ಸಾಹಿತ್ಯಾಸಕ್ತ. ಹಾಗಾಗಿ ಕಥೆ, ಕವನ, ನಾಟಕ, ಕಾದಂಬರಿ ಆಧರಿತ ಅನೇಕ ಚಲನಚಿತ್ರಗಳನ್ನು ನೋಡುತ್ತೇನೆ. ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನನ್ನ ಅಧಿಕಾರಾವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ ’ ಎಂದು ತಿಳಿಸಿದರು.

‘ಪ್ರವೃತ್ತಿಯಲ್ಲಿ ಯಾರು ಸಾಹಿತ್ಯ ಸೇವೆ ಮಾಡುತ್ತಾರೋ ಅವರು ಪರಿಷತ್‌ಗೆ ಆಯ್ಕೆಯಾಗಬಹುದು. ಚುನಾವಣೆ ಮುಕ್ತವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆ ವಿಧಾನಗಳಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.