ADVERTISEMENT

ಶಿಡ್ಲಘಟ್ಟಕ್ಕೆ ರಾಮಸಮುದ್ರ ಕೆರೆ ನೀರು ಹರಿಸದಿರಿ: ದೇವಗಾನಹಳ್ಳಿ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 13:36 IST
Last Updated 8 ಮೇ 2025, 13:36 IST
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್‌.ದೇವಗಾನಹಳ್ಳಿ ರಾಮಸಮುದ್ರ ಕೆರೆ ನೀರನ್ನು ಶಿಡ್ಲಘಟ್ಟ ನಗರಕ್ಕೆ ಪೂರೈಸಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಕೆರೆ ನೀರು ಬಳಕೆದಾರರು ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್‌.ದೇವಗಾನಹಳ್ಳಿ ರಾಮಸಮುದ್ರ ಕೆರೆ ನೀರನ್ನು ಶಿಡ್ಲಘಟ್ಟ ನಗರಕ್ಕೆ ಪೂರೈಸಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಕೆರೆ ನೀರು ಬಳಕೆದಾರರು ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದರು   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್‌.ದೇವಗಾನಹಳ್ಳಿ ರಾಮಸಮುದ್ರ ಕೆರೆಯ ನೀರನ್ನು ಶಿಡ್ಲಘಟ್ಟ ನಗರಕ್ಕೆ ಪೂರೈಸಲು ಜಿಲ್ಲಾಡಳಿತ ಮುಂದಾಗಿದೆ. ತಕ್ಷಣವೇ ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ದೇವಗಾನಹಳ್ಳಿ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.

ರಾಮಸಮುದ್ರ ಕೆರೆಯು 1889ರಲ್ಲಿ ಸ್ಥಾಪನೆಯಾಗಿದೆ. 1894ರಲ್ಲಿ ಉದ್ಘಾಟನೆಯಾಗಿದೆ. ಕೃಷಿ ಬಳಕೆಗೆ ಎಂದೇ ಈ ಕೆರೆ ನಿರ್ಮಿಸಲಾಗಿದೆ. ಇದು ಈ ಭಾಗಕ್ಕೆ ಆಸರೆಯಾಗಿದೆ. ರಾಮಸಮುದ್ರದ ಕೆರೆ ಅಭಿವೃದ್ಧಿಗೊಳಿಸಲಾಗಿದೆ. ಮೂರು ಬಾರಿ ಕೋಡಿಯೂ ಹರಿದಿದೆ.

ಆದರೆ ಈಗ ಜಿಲ್ಲಾಡಳಿತ ಶಿಡ್ಲಘಟ್ಟ ನಗರಕ್ಕೆ ಇಲ್ಲಿಂದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುತ್ತಿದೆ. ಇದನ್ನು ತಕ್ಷಣವೇ ಕೈ ಬಿಡಬೇಕು.

ADVERTISEMENT

ಯಾವುದೇ ರೀತಿಯ ನಾಲೆಗಳು ಈ ಭಾಗದಲ್ಲಿ ಇಲ್ಲ. ಈ ಕೆರೆಯೇ ಜಲಮೂಲಕ್ಕೆ ಆಧಾರ. ಇಲ್ಲಿನ ರೈತರಲ್ಲಿ ಶೇ 70ರಷ್ಟು ಬಡವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಇದ್ದಾರೆ. ಈ ಕೆರೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ತಾವು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕು. ಕುಡಿಯುವ ನೀರು ಪೂರೈಕೆ ಯೋಜನೆ ಕೈ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕೃಷಿ ಮತ್ತು ನೀರಾವರಿ ಕಾಯ್ದೆ ಅನ್ವಯ ಸದರಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಜೂನ್‌–ಜುಲೈನಲ್ಲಿ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೆರೆ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ರಾಮಸಮುದ್ರ ಕೆರೆ ವ್ಯಾಪ್ತಿಯ ಗ್ರಾಮಗಳ ರೈತರು ಕೋರಿದ್ದಾರೆ.

ಜಿಲ್ಲಾ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಡಿ.ವಿ ಪ್ರಸಾದ್, ಸೀತಾರಾಮಪ್ಪ, ಎಂ.ನರಸಿಂಹರೆಡ್ಡಿ, ಮುನಿರಾಜು ವೈ.ವಿ., ಗ್ರಾ.ಪಂ ಮಾಜಿ ಸದಸ್ಯ ವಿ.ವೆಂಕಟೇಶಪ್ಪ, ಹನುಮಪ್ಪ ಬಿ., ನಾಗೇಶ್, ಚಂದ್ರಶೇಖರ್, ಪ್ರದೀಪ್ ಕುಮಾರ್ ಮತ್ತಿತರರು ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.